ರಾಜ್ಯ

4 ವರ್ಷಗಳಿಂದ ಸಿಗದ ವೇತನ: ಹುತಾತ್ಮ ಪಿಎಸ್ಐ ಬಂಡೆ ಮಕ್ಕಳ ಶಿಕ್ಷಣಕ್ಕೆ ಸಮಸ್ಯೆ, ಸರ್ಕಾರದ ವಿರುದ್ಧ ಜೆಡಿಎಸ್ ಕಿಡಿ

Nagaraja AB

ಬೆಂಗಳೂರು: ಹುತಾತ್ಮ‌ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ವೇತನಕ್ಕೆ ಸರ್ಕಾರ ತಡೆ ಒಡ್ಡಿ ನಾಲ್ಕು ವರ್ಷಗಳಾಗಿದ್ದು, ಅವರ ಮಕ್ಕಳ ಶಿಕ್ಷಣಕ್ಕೆ ಸಮಸ್ಯೆಯಾಗಿದೆ ಎಂದು ಜೆಡಿಎಸ್ ಕಿಡಿಕಾರಿದೆ.

ಈ ಕುರಿತು ಸರಣಿ ಟ್ವೀಟ್ ಮೂಲಕ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಜೆಡಿಎಸ್, 2012ರಲ್ಲಿ ನಿಧನರಾದ ಮಲ್ಲಿಕಾರ್ಜುನ ಬಂಡೆಯವರ ವೇತನವನ್ನು 2019ರಿಂದ ಇಲ್ಲಿಯವರೆಗೂ ಕೊಟ್ಟಿಲ್ಲ. ತಾಂತ್ರಿಕ ಸಮಸ್ಯೆಯ ಕಾರಣದಿಂದ ಇದು ಸಾಧ್ಯವಾಗಿಲ್ಲ ಎಂಬುದು ರಾಜ್ಯ   ಸರ್ಕಾರದ ಸಮಜಾಯಿಷಿಯಾಗಿದ್ದು, ಸರ್ಕಾರವೊಂದು ಇಷ್ಟು ಲಜ್ಜೆಗೇಡಿಯಾಗಬಹುದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. 

ಮಲ್ಲಿಕಾರ್ಜುನ ಬಂಡೆಯವರ ಮಕ್ಕಳ ವಿದ್ಯಾಭ್ಯಾಸ ಮತ್ತು ಭವಿಷ್ಯದ ಸಲುವಾಗಿ 2016ರಿಂದ ಸರ್ಕಾರವು ವೇತನ ನೀಡುತ್ತಿತ್ತು. 2019ರ ಅಕ್ಟೋಬರ್ ನಿಂದ ಈವರೆಗೂ ಮಾಸಿಕ ವೇತನ ಪಾವತಿಯಾಗಿಲ್ಲ. ತಾಂತ್ರಿಕ ದೋಷ ಅಥವಾ ಅಡೆ-ತಡೆ‌ ನಿವಾರಿಸಲು ನಾಲ್ಕು ವರ್ಷಗಳು ಬೇಕೆ? ಎಂದು ಪ್ರಶ್ನಿಸಿದ್ದು, ಸಿಎಂ ಮತ್ತು ಗೃಹ ಸಚಿವರಿಗೆ  ಇಂತಹ ಒಂದು ಚಿಕ್ಕ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲದ ಮೇಲೆ ನಿಮಗೆ ಅಧಿಕಾರ ಏಕೆ ಬೇಕು?  ನಿರ್ಲಕ್ಷ್ಯದ ನಡೆಯಿಂದ ಹುತಾತ್ಮ ಪೊಲೀಸ್‌ ಅಧಿಕಾರಿಯ ಮಕ್ಕಳ ವಿದ್ಯಾಭ್ಯಾಸಕ್ಕೆ ಕುತ್ತು ಬಂದಿದೆ ಎಂದು ಆರೋಪಿಸಿದೆ. 

ಬಂಡೆ ಅವರ ಪತ್ನಿಯೂ ಆರೋಗ್ಯ ಸಮಸ್ಯೆಯಿಂದ 2016ರಲ್ಲಿಯೇ ತೀರಿಕೊಂಡಿದ್ದಾರೆ. ಅನಾಥ ಮಕ್ಕಳನ್ನು ದತ್ತು ತೆಗೆದುಕೊಳ್ಳುತ್ತೇವೆ ಎಂದು ಸಂತೆ ಭಾಷಣ ಮಾಡಿದ್ದ ಕೇಂದ್ರ ಗೃಹ ಸಚಿವ  ಅಮಿತ್ ಶಾ ಈಗೇನು ಹೇಳುತ್ತಾರೆ? ಮಕ್ಕಳ ಪೋಷಣೆ ಮಾಡುತ್ತಿರುವವರು ಕಚೇರಿಗಳಿಗೆ ದಿನವೂ ಅಲೆಯುವಂತಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಕಿಂಚಿತ್ತಾದರೂ ಮಾನವೀಯತೆ ಇದ್ದರೆ ಈ ಕ್ಷಣವೆ ಸಮಸ್ಯೆ ಬಗೆಹರಿಸಿ ನಾಲ್ಕು ವರ್ಷಗಳ ಬಾಕಿ ಮೊತ್ತ ಪಾವತಿಯಾಗುವಂತೆ ವ್ಯವಸ್ಥೆ ಮಾಡುವಂತೆ ಜೆಡಿಎಸ್ ಒತ್ತಾಯಿಸಿದೆ. 

SCROLL FOR NEXT