ರಾಜ್ಯ

ಮಿಸೆಸ್ ಇಂಟರ್‌ನ್ಯಾಶನಲ್ ಸೂಪರ್ ಕ್ವೀನ್ 2023: 16 ವಿವಾಹಿತ ಮಹಿಳೆಯರು ಭಾಗಿ, ಹುಬ್ಬಳ್ಳಿಯ ರಾಧಿಕಾ ಹಬೀಬ್ ಮುಡಿಗೆ ಕಿರೀಟ

Manjula VN

ಬೆಂಗಳೂರು: ಮದುವೆಗೂ ಮುಂಚೆ ಫ್ಯಾಶನ್ ಶೋಗಳಲ್ಲಿ ತೊಡಗಿಸಿಕೊಂಡ ಅದೆಷ್ಟೋ ಮಹಿಳೆಯರು ಮದುವೆ ನಂತರ ಸಂಸಾರ, ಮಕ್ಕಳು ಎಂದು ಬ್ಯುಸಿ ಆಗಿರುತ್ತಾರೆ. ಅಂತಹ ಮಹಿಳೆಯರಲ್ಲಿ ಆಸಕ್ತಿಯನ್ನು ಮುಂದುವರೆಸಲು ನಗರದ ಶಾಂಘ್ರೀಲಾ ಹೋಟೆಲ್‌'ನಲ್ಲಿ ಭಾನುವಾರ ಮಿಸೆಸ್ ಇಂಟರ್‌ನ್ಯಾಶನಲ್ ಸೂಪರ್ ಕ್ವೀನ್ 2023 ಸ್ಪರ್ಧೆಯನ್ನು ನಡೆಸಲಾಯಿತು.

ಈ ಸ್ಪರ್ಧೆಯಲ್ಲಿ ವಿವಾಹಿತ ಮಹಿಳೆಯರ ಮಸ್ತ್ ರ‍್ಯಾಂಪ್ ವಾಕ್ ಕಣ್ಮನ ಸೆಳೆಯುವಂತಿತ್ತು. ವಿವಿಧ ರೀತಿಯ ಉಡುಪನ್ನ ಪರಿಚಯಿಸಿದ ಶ್ರೀಮತಿಯರ ಫ್ಯಾಶನ್ ಶೋ ಕಂಡು ನೆರೆದಿದ್ದ ಜನ ಫಿದಾ ಆದರು.

ಯುವತಿಯರೇ ನಾಚುವಂತೆ 20, 30, 45 ಮತ್ತು 45ಕ್ಕಿಂತಲೂ ಮೇಲ್ಪಟ್ಟ ವಯಸ್ಸಿನ ವಿವಾಹಿತ ಮಹಿಳೆಯರು ವೇದಿಕೆ ಮೇಲೆ ಹೆಜ್ಜೆಹಾಕಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ನಾರಿಯರ ವಾಕ್ ನೋಡುಗರ ಕಣ್ಮನ ಸೆಳೆಯಿತು.

ಖ್ಯಾತ ಜ್ಯೋತಿಷಿ ಡಾ.ಎಸ್.ಕೆ.ಜೈನ್ ಅವರ ಪತ್ನಿ ಮಿಸೆಸ್ ಇಂಡಿಯಾ ಗ್ಲೋಬ್ 2016ರ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗಳ ರಾಷ್ಟ್ರೀಯ ನಿರ್ದೇಶಕಿ ವೀಣಾ ಜೈನ್ ಅವರು, ರಾಜ್ಯ ವಿವಾಹಿತ ಮಹಿಳೆಯರು ತಮ್ಮ ಸೌಂದರ್ಯ ಮತ್ತು ಪ್ರತಿಭೆಯನ್ನು ಪ್ರದರ್ಶಿಸಲು, ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಲು ಈ ಸ್ಪರ್ಧೆಯನ್ನು ಆಯೋಜಿಸಿದ್ದರು.

ಸ್ಪರ್ಧೆಯಲ್ಲಿ 16 ಮಂದಿ ವಿವಾಹಿತ ಮಹಿಳೆಯರು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ರಾಧಿಕಾ ಹಬೀಬ್ ಅವರು “ಮಿಸೆಸ್ ಇಂಟರ್‌ನ್ಯಾಶನಲ್ ಸೂಪರ್ ಕ್ವೀನ್ 2023” (45 ವರ್ಷದವರೆಗಿನ ವಿಭಾಗ) ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡರು.

ಬೆಂಗಳೂರಿನಲ್ಲಿ ಭಾನುವಾರ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗಳ ರಾಷ್ಟ್ರೀಯ ನಿರ್ದೇಶಕಿ ವೀಣಾ ಜೈನ್ ಆಯೋಜಿಸಿದ್ದ ಮಿಸೆಸ್ ಇಂಟರ್‌ನ್ಯಾಶನಲ್ ಸೂಪರ್ ಕ್ವೀನ್ 2023ರಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳ ಚಿತ್ರ.

ಸುಮಾರು 20 ವರ್ಷಗಳ ನಂತರ ಗೂಡಿನಿಂದ ಹೊರಬಂದಿದ್ದೇನೆ. ಪ್ರಶಸ್ತಿ ಗೆದ್ದಿರುವುದು ಬಹಳ ಸಂತಸ ತಂದಿದೆ. ನನ್ನಂತಹ ಎಲ್ಲಾ ಮಹಿಳೆಯರಿಗೆ ಸ್ವಯಂ ಪ್ರೀತಿ ಅಭ್ಯಾಸ ಮಾಡಿಕೊಳ್ಳುವುದು ಬಹಳ ಮುಖ್ಯ ಎಂಬ ಸಂದೇಶ ನೀಡಲು ನಾನು ಬಯಸುತ್ತೇನೆ. ಯಾವಾಗಲೂ ಕುಟುಂಬಕ್ಕಷ್ಟೇ ಆದ್ಯತೆ ನೀಡುವುದಲ್ಲ. ನಮ್ಮ ಮೇಲೆ ನಾವು ಕೆಲಸ ಮಾಡುವುದೂ ಕೂಡ ಅಷ್ಟೇ ಮುಖ್ಯ ಎಂದು ರಾಧಿಕಾ ಹಬೀಬ್ ಅವರು ಹೇಳಿದ್ದಾರೆ.

ರಶ್ಮಿ ಕುಲ್ಲೂರ್ ಅವರು "ಮಿಸೆಸ್ ಇಂಟರ್ನ್ಯಾಷನಲ್ ಕ್ಲಾಸಿಕ್ ಸೂಪರ್ ಕ್ವೀನ್" ಪ್ರಶಸ್ತಿಯನ್ನು (45 ವರ್ಷ ಮತ್ತು ಮೇಲ್ಪಟ್ಟ ವಿಭಾಗ) ಗೆದ್ದುಕೊಂಡರು.

ರಾಧಿಕಾ ಹಬೀಬ್

ಸ್ಪರ್ಧೆಯಲ್ಲಿ ವಿವಿಧ ಆಯಾಮಗಳ ಹಲವಾರು ಮಹಿಳೆಯರು, ಗೃಹಿಣಿಯರು, ಉದ್ಯಮಿಗಳು, ಕಲಾವಿದರು, ನಟರು, ಕಾರ್ಪೊರೇಟ್ ಉದ್ಯೋಗಿಗಳು ಮತ್ತು ಸ್ಟೈಲಿಸ್ಟ್‌ಗಳು ಭಾಗವಹಿಸಿದ್ದರು. ಅನೇಕರು ತಮ್ಮ ಜೀವನದಲ್ಲಿ ಮೊದಲ ಬಾರಿಗೆ ವೇದಿಕೆಯ ಮೇಲೆ ನಡೆದ ಅನುಭವವನ್ನು ಹಂಚಿಕೊಂಡರು. ಇದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ನಮ್ಮ ಉತ್ಸಾಹವನ್ನು ಮುಂದುವರಿಸಲು ಧೈರ್ಯವನ್ನೂ ನೀಡಿತು ಎಂದು ರಾಧಿಕಾ ಅವರು ತಿಳಿಸಿದ್ದಾರೆ.

ಈ ಸ್ಪರ್ಧೆಯು ಕೇವಲ ಒಂದು ಮೆಟ್ಟಿಲಷ್ಟೇ. ಇನ್ನು ಮುಂದೆ ಗೆದ್ದರೂ, ಸೋತರೂ ಇಂತಹ ಹೆಚ್ಚಿನ ಸ್ಪರ್ಧೆಗಳಲ್ಲಿ ಭಾಗವಹಿಸುವುದನ್ನು ಮುಂದುವರಿಸುತ್ತೇನೆಂದು ಹೇಳಿದ್ದಾರೆ.

ಜ್ಯೂರಿ ಸದಸ್ಯರಲ್ಲಿ ಒಬ್ಬರಾಗಿ ನಟಿ ಪ್ರಿಯಾಂಕಾ ಉಪೇಂದ್ರ ಅವರು ಇದ್ದರು. ಸ್ಪರ್ಧೆ ವೇಳೆ ಪ್ರಿಯಾಂಕಾ ಅವರು ಕೋಲ್ಕತ್ತಾದಲ್ಲಿ ಸೌಂದರ್ಯ ಸ್ಪರ್ಧೆಯೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದನ್ನು ಹಂಚಿಕೊಂಡರು.

ಮದುವೆಯ ನಂತರ ಮಹಿಳೆಯರ ಆದ್ಯತೆಗಳು ಬದಲಾಗುತ್ತವೆ. ತಮಗಾಗಿ ಸಮಯ ಕಳೆಯುವುದು ಅತ್ಯಂತ ಕಡಿಮೆಯಾಗುತ್ತದೆ. ಎಲ್ಲಾ ಮಹಿಳೆಯರು ತಮ್ಮ ಉತ್ಸಾಹ, ಕಲೆ ಮುಂದುವರಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಅದು ಅವರಿಗೆ ಜೀವನದಲ್ಲಿ ಪ್ರೇರಣೆಯ ಶಕ್ತಿಯಾಗಿದೆ. ಆಗ ಮಾತ್ರ ಮಹಿಳೆಯರು ತಮ್ಮ ಆಂತರಿಕ ಕೌಶಲ್ಯಗಳನ್ನು ಸುಧಾರಿಸುವತ್ತ ಕೆಲಸ ಮಾಡಬಹುದು. ಮಹಿಳೆಯರು ತಮಗಾಗಿ ಸಮಯವನ್ನು ವಿನಿಯೋಗಿಸಬೇಕು ಎಂದು ಪ್ರಿಯಾಂಕಾ ಅವರು ಹೇಳಿದರು.

ವಿಶ್ವದಾದ್ಯಂತ ಮಹಿಳೆಯರನ್ನು ಪ್ರೋತ್ಸಾಹಿಸಲು ಮತ್ತು ಅವರ ಉತ್ಸಾಹವನ್ನು ಮುಂದುವರಿಸಲು ಅವರಿಗೆ ಅವಕಾಶಗಳನ್ನು ಒದಗಿಸಲು ಮುಂದಿನ ಕೆಲವು ವರ್ಷಗಳಲ್ಲಿ ಭಾರತ ಮತ್ತು ಪ್ರಪಂಚದಾದ್ಯಂತ ಇಂತಹ ಸ್ಪರ್ಧೆಗಳನ್ನು ಆಯೋಜಿಸಲು ತೀರ್ಪುಗಾರರು ಚಿಂತನೆ ನಡೆಸಿದ್ದಾರೆ.

SCROLL FOR NEXT