ರಾಜ್ಯ

ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ಕಾಫಿ, ತಿಂಡಿ, ಬಿಸ್ಕೆಟ್ ಹೆಸರಲ್ಲಿ 200 ಕೋಟಿ ರೂಪಾಯಿ ಲೂಟಿ ಮಾಡಲಾಗಿದೆ: ಬಿಜೆಪಿ

Manjula VN

ಬೆಂಗಳೂರು: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವಿದೇಶಿ ಗಣ್ಯರು ಹಾಗೂ ಅತಿಥಿಗಳಿಗೆ ಕಾಫಿ, ತಿಂಡಿ, ಬಿಸ್ಕೆಟ್ ಕೊಡುವ ಹೆಸರಿನಲ್ಲಿಯೇ 200 ಕೋಟಿ ರೂಪಾಯಿಯನ್ನು ಲೂಟಿ ಮಾಡಲಾಗಿದೆ ಎಂದು ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಅವರು ಸೋಮವಾರ ಆರೋಪಿಸಿದ್ದಾರೆ.

ಸೋಮವಾರ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಆರೋಪಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆಗೊಳಿಸಿದ ಅವರು, ಸಿದ್ದರಾಮಯ್ಯ ಅವರ ಅಧಿಕಾರದ ಅವಧಿಯಲ್ಲಿ ಕಾಫಿ, ತಿಂಡಿ, ಬಿಸ್ಕತ್ ಹೆಸರಿನಲ್ಲಿಯೇ 200 ಕೋಟಿ ರೂಪಾಯಿ ಲೂಟಿ ಮಾಡಲಾಗಿದೆ. ಪ್ರಕರಣವನ್ನು ಸಿಐಡಿ ಅಥವಾ ಸಿಬಿಐಗೆ ವಹಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

‘‘ಮಾಜಿ ಸಿಎಂ ಸಿದ್ದರಾಮಯ್ಯ, ಅವರ ಸಿಬ್ಬಂದಿ, ರಾಜ್ಯ ಸರಕಾರಿ ಸಿಬ್ಬಂದಿ, ಆಡಳಿತ ಸುಧಾರಣಾ ಇಲಾಖೆ ಅಧಿಕಾರಿಗಳು ಸೇರಿ ಮಾಡಿರುವ ಬೃಹತ್ ಹಗರಣ ಇದಾಗಿದ್ದು, ರೂ. 2013-18 ರಿಂದ 5 ವರ್ಷಗಳ ಕಾಲ ವಿದೇಶಿ ಅತಿಥಿಗಳು ಮತ್ತು ಗಣ್ಯರಿಗೆ ಆತಿಥ್ಯ ನೀಡುವ ಹೆಸರಿನಲ್ಲಿ ಲೂಟಿ ಮಾಡಲಾಗಿದೆ ಎಂದು ಆರೋಪಿಸಿದರು.

ಕಳೆದ 75 ವರ್ಷಗಳಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿರುವ 25 ಮಂದಿ ಮುಖ್ಯಮಂತ್ರಿಗಳ ಪೈಕಿ, ಬೇರೆ ಇನ್ಯಾವ ಮುಖ್ಯಮಂತ್ರಿಯ ಅವಧಿಯಲ್ಲಿ ನಡೆಯದ “ಅತಿಥಿ ಉಪಚಾರ”ದ ಹೆಸರಿನ ಇಂತಹ ಭ್ರಷ್ಟಾಚಾರ ಸಿದ್ದರಾಮಯ್ಯನವರ ಅವಧಿಯಲ್ಲಿ ನಡೆದಿದೆ. ಸರ್ಕಾರದ ಯಾವೊಂದು ಯೋಜನೆಗಳನ್ನೂ ಬಿಡದೆ, ಎಲ್ಲದರಲ್ಲೂ ಸಾವಿರಾರು ಕೋಟಿ ಭ್ರಷ್ಟಾಚಾರ ನಡೆಸಿದ್ದ ಸಿದ್ದರಾಮಯ್ಯನವರ ಸರ್ಕಾರ ಕೊನೆಗೆ ಕಾಫಿ, ತಿಂಡಿ, ಉಪಹಾರದ ಹೆಸರಿನಲ್ಲೂ ಬೃಹತ್ ಮೊತ್ತದ ವಂಚನೆ ಎಸಗಿದೆ ಎಂದು ಹೇಳಿದರು.

SCROLL FOR NEXT