ರಾಜ್ಯ

ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು

Sumana Upadhyaya

ಬೆಂಗಳೂರು: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಸದ್ಯಕ್ಕೆ ಬಿಗ್ ರಿಲೀಫ್ ಸಿಕ್ಕಿದೆ. ಪುತ್ರ ಮಾಡಾಳ್ ಪ್ರಶಾಂತ್ ಮೇಲೆ ಲೋಕಾಯುಕ್ತ ಪೊಲೀಸರು ನಡೆಸಿದ ದಾಳಿಯ ನಂತರ ಅವರ ನಿವಾಸ ಮತ್ತು ಕಚೇರಿಯಲ್ಲಿ ಸಿಕ್ಕಿದ 8 ಕೋಟಿಗೂ ಅಧಿಕ ಲೆಕ್ಕಕ್ಕೆ ಸಿಗದ ನಗದು ಪ್ರಕರಣ ಹಿನ್ನೆಲೆಯಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಸೇರಿದಂತೆ ಆರು ಮಂದಿ ವಿರುದ್ಧ ಕೇಸು ದಾಖಲಾಗಿತ್ತು.

ಪುತ್ರನ ಲಂಚ ಪ್ರಕರಣದಲ್ಲಿ A1 ಆರೋಪಿಯಾಗಿರುವ ಕೆಎಸ್ ಡಿಎಲ್ ಮಾಜಿ ಚೇರ್ಮನ್ ಬಿಜೆಪಿ ಶಾಸಕ ಮಾಡಳ್ ವಿರೂಪಾಕ್ಷಪ್ಪಗೆ ಮಧ್ಯಂತರ ಜಾಮೀನು ಸಿಕ್ಕಿದೆ. ನ್ಯಾಯಾಮುರ್ತಿ ನಟರಾಜನ್ ಅವರು ಮಾಡಳ್ ವಿರೂಪಾಕ್ಷಪ್ಪಗೆ(Madal Virupakshappa) ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ.

ಇಂದು ವಿಚಾರಣೆ ನಡೆಸಿ ತೀರ್ಪು ನೀಡಿದ ಹೈಕೋರ್ಟ್ ನ ಏಕಸದಸ್ಯ ಪೀಠ ಶಾಸಕರಿಗೆ ಮಧ್ಯಂತರ ಜಾಮೀನು ನೀಡಿ ಆದೇಶ ಪ್ರತಿ ಕೈಗೆ ಸಿಕ್ಕಿದ 48 ಗಂಟೆಗಳೊಳಗೆ ಶರಣಾಗುವಂತೆ ಶಾಸಕರಿಗೆ ಸೂಚಿಸಿದೆ. ಲೋಕಾಯುಕ್ತ ಪೊಲೀಸರು ಸೂಕ್ತ ದಾಖಲೆ ಸಲ್ಲಿಸುವವರೆಗೆ ಶಾಸಕರಿಗೆ ಜಾಮೀನು ಸಿಕ್ಕಿದೆ. ಮುಂದಿನ ವಿಚಾರಣೆಯನ್ನು ಹೈಕೋರ್ಟ್ ಮಾರ್ಚ್ 17ಕ್ಕೆ ಮುಂದೂಡಿದೆ. 

ಮಧ್ಯಂತರ ಜಾಮೀನು ಆದೇಶ ನೀಡುವ ವೇಳೆ ಶಾಸಕರು 5 ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಮತ್ತು ಇಬ್ಬರು ಶ್ಯೂರಿಟಿ ಹಾಕುವಂತೆ ಷರತ್ತು ವಿಧಿಸಲಾಗಿದೆ. ಬಂಧನ ಭೀತಿಯಲ್ಲಿದ್ದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕಳೆದ 6 ದಿನಗಳಿಂದ ತಲೆಮರೆಸಿಕೊಂಡಿದ್ದರು. 

ಬೆಂಬಲಿಗರ ಹರ್ಷೋದ್ಘಾರ: ಮಾಡಾಳ್ ವಿರೂಪಾಕ್ಷಪ್ಪನವರಿಗೆ ಹೈಕೋರ್ಟ್ ನಿಂದ ಮಧ್ಯಂತರ ಜಾಮೀನು ಮಂಜೂರಾಗುತ್ತಿದ್ದಂತೆ ಚನ್ನಗಿರಿಯಲ್ಲಿ ಅವರ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ವಿರೂಪಾಕ್ಷಪ್ಪ ಪರ ಘೋಷಣೆಗಳನ್ನು ಕೂಗಿದರು. 

ಭ್ರಷ್ಟಾಚಾರ, ಲಂಚ ಪ್ರಕರಣದಲ್ಲಿ ಮಾಡಾಳ್ ವಿರೂಪಾಕ್ಷಪ್ಪನವರ ಹೆಸರು ಕೇಳಿಬಂದಿರುವುದರಿಂದ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕ್ಲೀನ್ ಇಮೇಜ್ ಇರುವ ಬೇರೆ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ಪಕ್ಷ ಮುಂದಾಗಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.

SCROLL FOR NEXT