ರಾಜ್ಯ

'ಹಣೆಗೆ ಬಿಂದಿ ಯಾಕಿಟ್ಟಲ್ಲಮ್ಮಾ, ಅವಳಿಗೆ ಬಿಂದಿ ಕೊಡಿ, ಗಂಡ ಬದುಕಿದ್ದಾನೆ ತಾನೇ': ಮಹಿಳೆಯನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ಸಂಸದ ಮುನಿಸ್ವಾಮಿ

Sumana Upadhyaya

ಕೋಲಾರ: ಕೋಲಾರ ಜಿಲ್ಲೆಯ ಬಿಜೆಪಿ ಸಂಸದ ಎಸ್ ಮುನಿಸ್ವಾಮಿ(BJP MP Muniswamy) ಮಹಿಳೆ ಜೊತೆ ನಡೆದುಕೊಂಡಿರುವ ರೀತಿಗೆ ವಿವಾದಕ್ಕೊಳಗಾಗಿದ್ದಾರೆ. ಈ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದ ಮತ್ಯಾಲಪೇಟೆಯಲ್ಲಿ ನಡೆದಿದೆ.

ಕೋಲಾರದ ಚೆನ್ನಯ್ಯ ರಂಗಮಂದಿರದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಲಾಗಿತ್ತು. ಅದನ್ನು ಸಂಸದ ಎಸ್ ಮುನಿಸ್ವಾಮಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸುಜಾತ ಎಂಬುವವರು ಮಳಿಗೆ ಹಾಕಿದ್ದರು. ಅವರು ಹಣೆಗೆ ಕುಂಕುಮ ಧರಿಸಿಲ್ಲವೆಂದು ಸಂಸದರು ತರಾಟೆಗೆ ತೆಗೆದುಕೊಂಡಿದ್ದು ಈ ವಿಡಿಯೊ ವ್ಯಾಪಕವಾಗಿ ವೈರಲ್ ಆಗಿದೆ.

ವಿಡಿಯೊದಲ್ಲಿ ಸಂಸದರು, ”ಏನಮ್ಮ ನಿನ್ನ ಹೆಸರು, ಹಣೆಗೆ ಯಾಕೆ ಬಿಂದಿ ಇಟ್ಟಿಲ್ಲ? ಹಣ ಕೊಟ್ಟು ಬಲವಂತವಾಗಿ ಮತಾಂತರ ಮಾಡಿದ್ದಾರೆ ಅಲ್ಲವಾ? ವೈಷ್ಣವಿ ಎಂಬುದಾಗಿ ಅಂಗಡಿ ಹೆಸರನ್ನು ಯಾಕೆ ಇಟ್ಟುಕೊಂಡಿದ್ದೀಯಾ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಶಾಸಕ ಶ್ರೀನಿವಾಸಗೌಡ ತಡೆದರೂ ಸುಮ್ಮನಿರದ ಮುನಿಸ್ವಾಮಿ ಕೂಗಾಡಿದ್ದಾರೆ. ಪರಿಷತ್ ಸದಸ್ಯ ಗೋವಿಂದರಾಜು ಕೂಡ ಸಮಾಧಾನಿಸಲು ಯತ್ನಿಸಿದ್ದಾರೆ. ಆದರೆ, ಯಾರ ಮಾತಿಗೂ ಮುನಿಸ್ವಾಮಿ ಸುಮ್ಮನಾಗಲಿಲ್ಲ. 

ಯಾರೊ ಕಾಸು ಕೊಡುತ್ತಾರೆ ಅಂತ ಸುಜಾತ ಅಂತ ಹೆಸರು ಇಟ್ಟುಕೊಂಡಿದ್ದೀಯಾ? ಗಂಡ ಬದುಕಿದ್ದಾನೆ ತಾನೇ? ನಿನಗೆ ಕಾಮನ್ ಸೆನ್ಸ್ ಇಲ್ಲ. ತಂದೆ ಹೆಸರು ಬದಲಾಯಿಸುತ್ತೀಯಾ ನೀನು? ಅದನ್ನೆಲ್ಲ ಇಟ್ಟುಕೊಳ್ಳುವುದಕ್ಕೆ ಯೋಗ್ಯತೆ ಇಲ್ಲ ನಿನಗೆ..” ಎಂದು ಸಂಸದರು ಹರಿಹಾಯ್ದಿದ್ದಾರೆ. 

ಸಂಸದರು ಮಹಿಳೆಯನ್ನು ತರಾಟೆಗೆ ತೆಗದುಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಂಸದರ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. 

ಘಟನೆಯನ್ನು ಖಂಡಿಸಿರುವ ಕಾಂಗ್ರೆಸ್, ಇಂತಹ ಘಟನೆಗಳು ಬಿಜೆಪಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದೆ. 

SCROLL FOR NEXT