ರಾಜ್ಯ

10 ಜಿಲ್ಲೆಗಳು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕಳಪೆ ಸಾಧನೆ: ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಆಕ್ರೋಶ

Nagaraja AB

ಬೆಂಗಳೂರು: ಸಿಎಂ ಬೊಮ್ಮಾಯಿ ಕ್ಷೇತ್ರ ಹಾವೇರಿ ಸೇರಿದಂತೆ ಉತ್ತರ ಕರ್ನಾಟಕದ ಹತ್ತು ಜಿಲ್ಲೆಗಳು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕಳಪೆ ಸಾಧನೆ ಮಾಡಿದ್ದು, ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಸರ್ಕಾರ ಬಿಡುಗಡೆ ಮಾಡಿದ ವರದಿಯ ಪ್ರಕಾರ ಈ ಜಿಲ್ಲೆಗಳಲ್ಲಿ ಬಡತನ, ಅಪೌಷ್ಟಿಕತೆ ತಾಂಡವವಾಡುತ್ತಿದೆ. ಕೋಮು ಹಿಂಸೆ ಸೃಷ್ಟಿ ಮಾಡಿ ಜನರನ್ನು ಹಸಿವಿಗೆ ದೂಡಿದ ನೀಚ ಸರ್ಕಾರ  ಎಂದು ಜೆಡಿಎಸ್ ಕಿಡಿಕಾರಿದೆ.

ಈ ಕುರಿತು ಜೆಡಿಎಸ್ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದ್ದು, ಎರಡೂ ರಾಷ್ಟ್ರೀಯ ಪಕ್ಷಗಳು ಹಲವು ವರ್ಷಗಳ ಕಾಲ ಅಧಿಕಾರ ನಡೆಸಿ, ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಈ ಜಿಲ್ಲೆಗಳು ಸೋಲುವುದಕ್ಕೆ ಕಾರಣವಾಗಿವೆ. ಇವರ ಮಾನಗೇಡಿ ಆಡಳಿತದಿಂದ ಹಲವಾರು ಕ್ಷೇತ್ರಗಳು ಸೊರಗಿವೆ. ಈ ಸಲದ ಚುನಾವಣೆಯಲ್ಲಿ ಇವರಿಗೆ ಜನತೆ ಪಾಠ ಕಲಿಸಲು ಕಾತರರಾಗಿದ್ದಾರೆ ಎಂದು ಎಚ್ಚರಿಕೆ ನೀಡಿದೆ. 

ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಸೇರಿದಂತೆ ರಾಜ್ಯದ 102 ತಾಲೂಕುಗಳು ಅಪೌಷ್ಟಿಕತೆಯಂದ ತತ್ತರಿಸುತ್ತಿವೆ. ಹಸಿವು, ಉದ್ಯೋಗ, ನೈರ್ಮಲ್ಯ, ವಸತಿ, ಸುಸ್ಥಿರ ಆರ್ಥಿಕತೆ ಹೀಗೆ ಮುಖ್ಯ ವಿಷಯಗಳೆಲ್ಲ ರಾಜ್ಯ ಬಿಜೆಪಿ 
 ಸರ್ಕಾರದ ಆಡಳಿತದಲ್ಲಿ ಹಿಂದೆ ಸರಿದಿವೆ. ಜನರ ಬದುಕನ್ನು ಇಷ್ಟು ನಿಕೃಷ್ಟವಾಗಿ ಕಾಣುವುದು ಕ್ರೌರ್ಯ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ. 

ಕಳೆದ ನಾಲ್ಕು ವರ್ಷಗಳಲ್ಲಿ ಕೋಮು ಗಲಭೆ, ಕೋಮು ಹಿಂಸೆಯ 122 ಪ್ರಕರಣಗಳು ದಾಖಲಾಗಿದ್ದು,  ಕಳೆದ ಎರಡು ವರ್ಷಗಳಲ್ಲಿ 85 ಕೋಮು ಹಿಂಸೆಯ ಪ್ರಕರಣಗಳು ನಡೆಯಲು ಕಾರಣಗಳೇನು? ಹಿಂಸೆಗೆ ಬೌದ್ಧಿಕ ಚೌಕಟ್ಟು ನೀಡುವ ನಿಮ್ಮ ಶಾಸಕ, ಸಚಿವರುಗಳಲ್ಲವೆ? ನಿಮ್ಮ ಪಕ್ಷದ ಸಂಘಟನೆಗಳು ಮತ್ತದರ ‌ಕಾರ್ಯಕರ್ತರ ವಿರುದ್ಧ ಕ್ರಮ ಯಾವಾಗ? ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಜೆಡಿಎಸ್  ತರಾಟೆಗೆ ತೆಗೆದುಕೊಂಡಿದೆ. 

SCROLL FOR NEXT