ರಾಜ್ಯ

ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ವಿಶ್ವದ ಅತಿ ಉದ್ದದ ಪ್ಲಾಟ್‌​ಫಾರಂ ಶೀಘ್ರದಲ್ಲೇ ಪ್ರಧಾನಿ ಮೋದಿಯಿಂದ ಲೋಕಾರ್ಪಣೆ

Manjula VN

ಹುಬ್ಬಳ್ಳಿ: ಶ್ರೀ ಸಿದ್ದಾರೂಢ ಸ್ವಾಮಿ ರೈಲು ನಿಲ್ದಾಣದಲ್ಲಿ ಅಭಿವೃದ್ಧಿ ಪಡಿಸಿರುವ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್‌ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಲಿದ್ದಾರೆಂದು ತಿಳಿದುಬಂದಿದೆ.

ಪ್ರಧಾನಿ ಮೋದಿ ಅವರು ಮಾರ್ಚ್ 12 ರಂದು ಹುಬ್ಬಳ್ಳಿ-ಧಾರವಾಡಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಪ್ಲಾಟ್‌ಫಾರ್ಮ್‌'ನ್ನು ಲೋಕಾರ್ಪಣೆಗೊಳಿಸಲಿದ್ದಾರೆಂದು ಹೇಳಲಾಗುತ್ತಿದೆ.

ಐಐಟಿ-ಧಾರವಾಡದ ಶಾಶ್ವತ ಕ್ಯಾಂಪಸ್ ಉದ್ಘಾಟನೆಗೆ ಮೋದಿ ಅವರು ಅವಳಿ ನಗರಕ್ಕೆ ಭೇಟಿ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿಯೇ ವಿಶ್ವದ ಅತಿ ಉದ್ದದ ಹುಬ್ಬಳ್ಳಿ ರೈಲ್ವೆ ಪ್ಲಾಟ್‌​ಫಾರಂನ್ನೂ ಲೋಕಾರ್ಪಣೆಗೊಳಿಸಲಿದ್ದಾರೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹೇಳಿದ್ದಾರೆ.

ವಿಶ್ವದ ಅತಿ ಉದ್ದದ ಫಾರಂ ಎರಡು ವರ್ಷಗಳ ಹಿಂದೆ ಉದ್ಘಾಟನೆಗೆ ಸಿದ್ಧವಾಗಿತ್ತು. ಕಳೆದ ಅಕ್ಟೋಬರ್‌ನಲ್ಲಿ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವಳಿ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ಲಾಟ್‌ ಉದ್ಘಾಟನೆ ಮಾಡಲಿದ್ದಾರೆಂದು ಹೇಳಲಾಗುತ್ತಿತ್ತು. ಆದರೆ,  ನೈಋತ್ಯ ರೈಲ್ವೆ ಅಧಿಕಾರಿಗಳು ಪ್ರಧಾನಿಯವರು ಲೋಕಾರ್ಪಣೆಗೊಳಿಸಬೇಕೆಂದು ಬಯಸಿದ್ದರು. ಮೋದಿಯವರಿಗೆ ಸಮಯ ಸಿಗದ ಕಾರಣ ಉದ್ಘಾಟನೆಯನ್ನು ಮುಂದೂಡುತ್ತಲೇ ಬರಲಾಗಿತ್ತು. ಇದೀಗ ಉದ್ಘಾಟನೆಗೆ ಕೊನೆಗೂ ಸಮಯ ಕೂಡಿ ಬಂದಿದೆ.

ಈ ಹಿಂದೆ 1ನೇ ಪ್ಲಾಟ್‌​ಫಾರಂ 550 ಮೀಟರ್‌ ಉದ್ದವಿತ್ತು. ಇದನ್ನು ವಿಸ್ತರಿಸಿ 10 ಮೀಟರ್‌ ಅಗಲದೊಂದಿಗೆ 1505 ಮೀಟರ್‌ ವರೆಗೆ (1.5 ಕಿಮೀ) ವಿಸ್ತರಿಸಲಾಗಿದೆ. ಇದು ಜಗತ್ತಿನಲ್ಲೇ ಅತಿ ಉದ್ದದ ಪ್ಲಾಟ್‌​ಫಾರಂ ಆಗಿ ಹೊರಹೊಮ್ಮಲಿದೆ. ಈವರೆಗೂ ಈಶಾನ್ಯ ರೈಲ್ವೆ ವಲಯದ ಗೋರಖ್‌ಪುರ ನಿಲ್ದಾಣದಲ್ಲಿರುವ 1366 ಮೀಟರ್‌ (1.36 ಕಿ.ಮೀ.) ಉದ್ದದ ಪ್ಲಾಟ್‌​ಫಾರಂ ಅತಿ ಉದ್ದದ್ದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಉದ್ದದ ಪ್ಲಾಟ್‌​ಫಾರಂನಲ್ಲಿ 3 ಮತ್ತು 8ನೇ ಪ್ಲಾಟ್‌​ಫಾರಂಗಳಿರಲಿವೆ. ಏಕಕಾಲಕ್ಕೆ ಎರಡು ರೈಲುಗಳು ವಿರುದ್ಧ ದಿಕ್ಕಿಗೆ ಸಂಚರಿಸಲು ಅನುಕೂಲವಾಗುವಂತೆ ಈ ಪ್ಲಾಟ್‌​ಫಾರಂ ವಿನ್ಯಾಸಗೊಳಿಸಲಾಗಿದೆ.

SCROLL FOR NEXT