ರಾಜ್ಯ

ಪ್ರಧಾನಿ ಮೋದಿ ರಾಜ್ಯ ಭೇಟಿ: ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಾಲಕನ ಕಪ್ಪು ಬಣ್ಣದ ಟಿ-ಶರ್ಟ್ ತೆಗೆಸಿದ ಭದ್ರತಾ ಸಿಬ್ಬಂದಿ

Ramyashree GN

ಮಂಡ್ಯ: ಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಗಾಗಿ ನಿಯೋಜನೆಗೊಂಡ ಪೊಲೀಸರು ಮತ್ತು ಸಿಬ್ಬಂದಿ ಭಾನುವಾರ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಬಾಲಕನೊಬ್ಬನ ಕಪ್ಪು ಬಣ್ಣದ ಟೀ ಶರ್ಟ್ ಅನ್ನು ತೆಗೆಸಿರುವ ಘಟನೆ ನಡೆದಿದೆ.

ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರು-ಮೈಸೂರು ಎಕ್ಸಪ್ರೆಸ್​​ವೇಯನ್ನು ಉದ್ಘಾಟಿಸಲು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆಗೆ ಆಗಮಿಸಿದ್ದಾರೆ. ಹೀಗಾಗಿ ಕಾರ್ಯಕ್ರಮ ನಡೆಸುವ ವೇದಿಕೆ ಸುತ್ತಲು ಬಿಗಿ ಪೊಲೀಸ್​ ಬಂದೋಬಸ್ತ್ ಮಾಡಲಾಗಿದ್ದು, ಕಾರ್ಯಕ್ರಮಕ್ಕೆ ಆಗಮಿಸುವ ಜನರನ್ನು ಪರಿಶೀಲಿಸಲಾಗುತ್ತಿದೆ.

ಈ ವೇಳೆ ಕಾರ್ಯಕ್ರಮಕ್ಕೆ ಬಾಲಕ ಕಪ್ಪು ಟೀ ಶರ್ಟ್ ಧರಿಸಿ ತನ್ನ ತಾಯಿಯೊಂದಿಗೆ ಬಂದಿದ್ದಾನೆ. ಈ ವೇಳೆ ಪೊಲೀಸರು ಆತನನ್ನು ತಡೆದು, ಟೀ ಶರ್ಟ್ ಕಪ್ಪಾಗಿರುವುದರಿಂದ ಅದನ್ನು ತೆಗೆಯುವಂತೆ ಆತನ ತಾಯಿಗೆ ಕೇಳಿದ್ದಾರೆ.

'ತಾಯಿ ಅದನ್ನು ತೆಗೆದು ತನ್ನ ಮಗನನ್ನು ಟಾಪ್‌ಲೆಸ್ ಆಗಿ ವೇದಿಕೆ ಕಾರ್ಯಕ್ರಮ ನಡೆಯುತ್ತಿದ್ದ ಆವರಣದೊಳಗೆ ಕರೆದೊಯ್ದಿದ್ದಾರೆ. ಮೆಟಲ್ ಡಿಟೆಕ್ಟರ್‌ಗಳ ಮೂಲಕ ಹಾದುಹೋದ ನಂತರ ತಾಯಿ ಮತ್ತೆ ತನ್ನ ಮಗನಿಗೆ ಟೀ-ಶರ್ಟ್ ಹಾಕಿದ್ದಾರೆ. ಆದರೆ, ಪೊಲೀಸ್ ಸಿಬ್ಬಂದಿ ಮತ್ತೆ ಆಕೆಯ ಬಳಿಗೆ ಧಾವಿಸಿ, ಪ್ರೋಟೋಕಾಲ್‌ನಿಂದ ಕಪ್ಪು ಟಿ-ಶರ್ಟ್‌ನೊಂದಿಗೆ ಹುಡುಗನನ್ನು ಒಳಗೆ ಬಿಡಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

ತಾಯಿ ಮತ್ತೆ ಮಗನ ಕಪ್ಪು ಟೀ ಶರ್ಟ್ ತೆಗೆದು ಟಾಪ್ ಲೆಸ್ ಆಗಿ ಒಳಗೆ ಕರೆದುಕೊಂಡು ಹೋಗಿದ್ದಾರೆ. ಯಾವುದೇ ಕಾರಣಕ್ಕೂ ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಲು ಸಾಧ್ಯವಿಲ್ಲ ಎಂದು ಪೊಲೀಸರು ಸಮರ್ಥಿಸಿಕೊಂಡಿದ್ದಾರೆ.

SCROLL FOR NEXT