ರಾಜ್ಯ

ಸಿಂಧನೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು- ಪೊಲೀಸರ ನಡುವೆ ವಾಗ್ವಾದ, ಪಿಎಸ್ಐ ಮೇಲೆ ಹಲ್ಲೆಗೆ ಯತ್ನ

Lingaraj Badiger

ರಾಯಚೂರು: ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಪುನಿತ್‌ ರಾಜಕುಮಾರ್‌ ಪ್ರತಿಮೆ ಸ್ಥಾಪನೆ ವಿಚಾರವಾಗಿ ಜೆಡಿಎಸ್‌ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಂಗಳವಾರ ಮಾರಾಮಾರಿ ನಡೆದಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ ಅವರ ಪುತ್ರ ಅಭಿಷೇಕ್ ನಾಡಗೌಡ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಸಿಂಧನೂರಿನಲ್ಲಿ ನೂತನವಾಗಿ ನಿರ್ಮಿಸಿದ ರಂಗ ಮಂದಿರದ ಮುಂದೆ ಚಿತ್ರನಟ ದಿವಂಗತ ಪುನಿತ್ ರಾಜಕುಮಾರ್ ಅವರ ಪ್ರತಿಮೆ ಸ್ಥಾಪಿಸಬೇಕು ಮತ್ತು ರಂಗ ಮಂದಿರಕ್ಕೆ ಅಪ್ಪು ಹೆಸರಿಡಬೇಕು ಎಂದು ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅಲ್ಲದೆ ಟ್ರಾಕ್ಟರ್ ನಲ್ಲಿ ಪುನಿತ್ ರಾಜಕುಮಾರ್ ಪುತ್ಥಳಿ ಮೆರವಣಿಗೆ ನಡೆಸಿದರು. ಈ ವೇಳೆ ಪೊಲೀಸರು ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ನಡೆಯಿತು.

ತಹಶೀಲ್ದಾರ್ ಅರುಣ್ ದೇಸಾಯಿ, ಸಿಂಧನೂರು ಪುರಸಭೆ ಆಯುಕ್ತ ಮಂಜುನಾಥ ಗುಂಡೂರು, ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ರವಿಕುಮಾರ್ ಕಪ್ಪಣ್ಣವರ್ ಮೆರವಣಿಗೆ ನಡೆಸಲು ಅವಕಾಶ ನೀಡದ ಕಾರಣ ಜೆಡಿಎಸ್ ಕಾರ್ಯಕರ್ತರು ಹಾಗೂ ಪೊಲೀಸ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು ಮತ್ತು ಪಿಎಸ್ಐ ಮೇಲೆ ಹಲ್ಲೆಗೂ ಯತ್ನಿಸಿದರು. ಅಂತಿಮವಾಗಿ ಪರಿಸ್ಥಿತಿ ಹದಗೆಡುವ ಸಾಧ್ಯತೆ ಇರುವುದರಿಂದ ತಾಲೂಕು ಆಡಳಿತ ಮೆರವಣಿಗೆಗೆ ಅವಕಾಶ ಕಲ್ಪಿಸಿತು.

ಇದೇ ವೇಳೆ ಸೋಮವಾರ(ಮಾರ್ಚ್ 13) ನಡೆದ ಸಿಂಧನೂರು ಪುರಸಭೆ ಸಭೆಯಲ್ಲಿ ರಂಗ ಮಂದಿರಕ್ಕೆ ಸೂಕ್ತ ಹೆಸರು ಇಡಲು ಪುರಸಭೆಗೆ 45 ಅರ್ಜಿಗಳು ಬಂದಿವೆ ಎಂದು ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಮಾಹಿತಿ ನೀಡಿದರು. ಪಟ್ಟಣದ ಪುರಸಭೆ ಸದಸ್ಯರು, ಶಾಸಕರು ಹಾಗೂ ಮುಖಂಡರ ಸಭೆ ಕರೆದು ರಂಗ ಮಂದಿರಕ್ಕೆ ಸೂಕ್ತ ಹೆಸರನ್ನಿಡುವ ಬಗ್ಗೆ ತೀರ್ಮಾನಿಸುವುದಾಗಿ ಮಲ್ಲಿಕಾರ್ಜುನ ಪಾಟೀಲ್ ಸೋಮವಾರ ಭರವಸೆ ನೀಡಿದ್ದರು.

ಅಲ್ಲದೆ ಪುನಿತ್ ರಾಜಕುಮಾರ್ ಅವರ ಪ್ರತಿಮೆ ಸ್ಥಾಪನೆಗೆ ಕಾರ್ಯಕರ್ತರಿಗೆ ಅವಕಾಶ ನೀಡದಂತೆ ಪುರಸಭೆ ಆಯುಕ್ತರು ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದಿದ್ದರು.

ಈ ಹಿನ್ನೆಲೆಯಲ್ಲಿ ಪೊಲೀಸರು ಪುನಿತ್ ರಾಜಕುಮಾರ್ ಪ್ರತಿಮೆ ಸ್ಥಾಪಿಸಲು ಅವಕಾಶ ನೀಡಿಲ್ಲ. ಹೀಗಾಗಿ ಪ್ರತಿಮೆಯನ್ನು ಸಿಂಧನೂರು ಶಾಸಕ ವೆಂಕಟ್ ರಾವ್ ನಾಡಗೌಡ ಅವರ ನಿವಾಸಕ್ಕೆ ಕೊಂಡೊಯ್ಯಲಾಯಿತು. ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿದ್ದರೂ ನಿಯಂತ್ರಣದಲ್ಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

SCROLL FOR NEXT