ರಾಜ್ಯ

ಬೆಂಗಳೂರು: ಮಹಿಳಾ ಪ್ರಯಾಣಿಕರೊಂದಿಗೆ ಅನುಚಿತ ವರ್ತನೆ, ನಿಂದನೆ ಆರೋಪದ ಮೇಲೆ ಹಿರಿಯ ಟಿಕೆಟ್ ಪರೀಕ್ಷಕ ಅಮಾನತು

Ramyashree GN

ಬೆಂಗಳೂರು: ನಿನ್ನೆ ಸಂಜೆ ಮದ್ಯದ ಅಮಲಿನಲ್ಲಿ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಬೆಂಗಳೂರು ರೈಲ್ವೆ ವಿಭಾಗದ ಹಿರಿಯ ಟಿಕೆಟ್ ಪರೀಕ್ಷಕನನ್ನು ಬುಧವಾರ ಅಮಾನತುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 
ಕೃಷ್ಣರಾಜಪುರಂ ರೈಲು ನಿಲ್ದಾಣದಲ್ಲಿ ಹೌರಾ-ಎಸ್‌ಎಂವಿಟಿ ಎಕ್ಸ್‌ಪ್ರೆಸ್‌ ನಿಂತ ನಂತರ ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಉಪ ಮುಖ್ಯ ಟಿಕೆಟ್ ಇನ್ಸ್‌ಪೆಕ್ಟರ್ ಸಂತೋಷ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ್ ಸಿಂಗ್ ಖಚಿತಪಡಿಸಿದ್ದಾರೆ. 'ಅಂತಹ ಪ್ರಕರಣಗಳಲ್ಲಿ ಬಲವಾದ ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಇಂತಹ ಪ್ರಕರಣಗಳಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ನಾವು ಹೊಂದಿದ್ದು, ಈಗ ತೆಗೆದುಕೊಳ್ಳಬೇಕಾದ ಕ್ರಮವನ್ನು ನಾವು ನಿರ್ಧರಿಸುತ್ತಿದ್ದೇವೆ' ಎಂದು ಅವರು ಟಿಎನ್ಐಇಗೆ ತಿಳಿಸಿದರು.

ಬೆಂಗಳೂರಿನ ಕರಿಷ್ಮಾ ಬೆಹೆರಾ ಎಂಬುವವರು ಎರಡು ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ ಟ್ವೀಟ್‌ ಮಾಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.

ಒಂದು ವಿಡಿಯೋದಲ್ಲಿ, ಅಧಿಕಾರಿಯು ಮೊಬೈಲ್ ಅನ್ನು ಹಿಂತಿರುಗಿಸುತ್ತಿರುವುದನ್ನು ತೋರಿಸಲಾಗಿದೆ ಮತ್ತು ಆಕೆ ಆತನನ್ನು ಜೋರಾಗಿ ಪ್ರಶ್ನಿಸುತ್ತಿದ್ದು, 'ನೀವು ನನ್ನನ್ನು ಏಕೆ ಎಳೆಯುತ್ತಿದ್ದೀರಿ? ನನ್ನ ಬಳಿ ಟಿಕೆಟ್ ಇದೆ' ಎನ್ನುತ್ತಾರೆ. ಈ ವೇಳೆ ಅಲ್ಲಿದ್ದ ಸಾರ್ವಜನಿಕರು ಆಕೆಯ ರಕ್ಷಣೆಗೆ ಧಾವಿಸಿದರು ಮತ್ತು ಅವರಲ್ಲಿ ಒಬ್ಬರು ಸಂತೋಷ್ ಅವರನ್ನು ಸಹ ಹಿಡಿದಿದ್ದಾರೆ.

ಇನ್ನೊಂದು ವಿಡಿಯೋದಲ್ಲಿ, ಮಹಿಳೆ ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲೂ ಸಂಭಾಷಣೆ ನಡೆಸುತ್ತಿದ್ದು, ಅದೇ ಟಿಕೆಟ್ ಪರೀಕ್ಷಕ ತುಂಬಾ ಅಸಹನೆಯಿಂದ ತನ್ನ ಮೊಬೈಲ್‌ನಿಂದ ಟಿಕೆಟ್ ಹಿಂಪಡೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಮತ್ತೋರ್ವ ಪ್ರಯಾಣಿಕ ಮಹಿಳೆಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ ಮತ್ತು ಟಿಕೆಟ್ ಪರೀಕ್ಷಕ ಮಹಿಳೆಯನ್ನು ಮುಟ್ಟುವುದು ಸರಿಯೇ ಎಂದು ಪ್ರಶ್ನಿಸುತ್ತಿದ್ದಾರೆ. 

ಘಟನೆ ಬಗ್ಗೆ ನಂತರ ವಿವರ ನೀಡುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಟ್ವೀಟ್ ವೈರಲ್ ಆಗಿದ್ದು, ರೈಲ್ವೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಲವರು ರೈಲ್ವೆ ಸಚಿವರನ್ನು ಕೋರಿದ್ದಾರೆ.

SCROLL FOR NEXT