ರಾಜ್ಯ

ಶಿವಾಜಿನಗರ ಹಬ್ಬ: ಮಿರಿಮಿರಿ ಮಿಂಚಿದ ಚಾಂದಿನಿ ಚೌಕ್‌, ಝಗಮಗಿಸಿದ ಸಂಭ್ರಮ

Manjula VN

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೃದಯಭಾಗದಲ್ಲಿ ಜನ ಮೂಗು ಮುಚ್ಚಿ ಓಡಾಡಬೇಕಾದ ಸ್ಥಿತಿಯಲ್ಲಿದ್ದ ಶಿವಾಜಿನಗರಕ್ಕೆ ಹೊಸ ರೂಪ ನೀಡಲಾಗಿದ್ದು, ಚಾಂದಿನಿ ಚೌಕ್ ನಲ್ಲಿ ಶನಿವಾರ ಅದ್ದೂರಿ ಯಾಗಿ ಹಬ್ಬ ಆಚರಣೆ ಮಾಡಲಾಯಿತು.

ಸ್ಮಾರ್ಟ್ ಸಿಟಿ ಲಿಮಿಟೆಡ್ ಅಡಿಯಲ್ಲಿ ಶಿವಾಜಿನಗರಕ್ಕೆ ಹೊಸ ರೂಪ ನೀಡಲಾಗಿದ್ದು, ಇದೇ ಮೊದಲ ಬಾಲಿಕೆ ಶಿವಾಜಿನಗರ ಹಬ್ಬವನ್ನು ಆಚರಿಸಲಾಯಿತು.

ಬಣ್ಣಗಳ ಅಲಂಕಾರಿಕ ದೀಪಗಳು ಇಡೀ ಪ್ರದೇಶ ಮಿರಿ ಮಿರಿ ಎಂದು ಮಿಂಚುವಂತೆ ಮಾಡಿತ್ತು. ಹಬ್ಬದಲ್ಲಿ ಸಾಕಷ್ಟು ಜನರು ಪಾಲ್ಗೊಂಡಿದ್ದರು.

ಹಬ್ಬದಲ್ಲಿ ಪಾಲ್ಗೊಂಡಿದ್ದ ಭಾರತಿನಗರ ವಾರ್ಡ್‌ನ ತಿಮ್ಮಯ್ಯ ರಸ್ತೆ ನಿವಾಸಿ ನಜೀರಾ ಬೇಗಂ ಎಂಬುವವರು ಮಾತನಾಡಿ, ಇದೇ ಮೊದಲ ಬಾರಿಗೆ ಶಿವಾಜಿನಗರದ ಕೇಂದ್ರ ಭಾಗದಲ್ಲಿ ಇಂತಹ ಕಾರ್ಯಕ್ರಮ ನಡೆದಿದೆ. ಇದು ಬಹಳ ಸಂತಸ ತಂದಿದೆ ಎಂದು ಹೇಳಿದರು.

ಅನೇಕ ಆಹಾರ ಮಳಿಗೆಗಳು, ಸಂಗೀತ ಕಾರ್ಯಕ್ರಮಗಳು ಹಬ್ಬದಲ್ಲಿ ನಡೆಯಿತು. ಸ್ಥಳದಲ್ಲಿದ್ದ ಕಾರಂಜಿ ಹಲವರನ್ನು ಆಕರ್ಷಿಸಿತು.

ಶಿವಾಜಿನಗರ ಈ ಹಿಂದೆ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ, ದುರ್ವಾಸನೆ ಬೀರುತ್ತಿತ್ತು. ಈಗ ಜನರು ಈಪ್ರದೇಶದಲ್ಲಿ ಮುಕ್ತವಾಗಿ ತಿರುಗಾಡಬಹುದಾಗಿದೆ. ಶಾಪಿಂಗ್'ನ್ನು ಆನಂದಿಸಬಹುದು ಎಂದು ನಜೀರಾ ಬೇಗಂ ಹೇಳಿದ್ದಾರೆ.

ಬಂಬೂ ಬಜಾರ್ ನಿವಾಸಿ ಅಭಿನಯಾ ಅವರು ಮಾತನಾಡಿ, ಸ್ಥಳದಲ್ಲಿನ ಅಭಿವೃದ್ಧಿ ಕಾರ್ಯಗಳು ಅಚ್ಚರಿಯನ್ನುಂಟು ಮಾಡಿದೆ. ತೆರವು ಮಾಡದ ಕಸ, ಅದರಿಂದ ಹೊರಸೂಸುವ ದುರ್ವಾಸನೆ ಮತ್ತು ವಾಹನಗಳನ್ನು ನಿಲ್ಲಿಸಲು ಸ್ಥಳವಿಲ್ಲದ ಕಾರಣ ಈ ಪ್ರದೇಶದಲ್ಲಿ ಭೇಟಿ ನೀಡಲು ಬಯಸುತ್ತಿರಲಿಲ್ಲ. ಇದೀಗ ಈ ಕ್ಷೇತ್ರದ ಪರಿವರ್ತನೆಯನ್ನು ನೋಡಲು ಸಂತೋಷವಾಗುತ್ತಿದೆ ಎಂದು ತಿಳಿಸಿದರು.

ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಅವರು ಮಾತನಾಡಿ, ಮುಂದಿನ ದಿನಗಳಲ್ಲೂ ಶಿವಾಜಿನಗರದಲ್ಲಿ ಸಂಗೀತ ರಾತ್ರಿಗಳು, ಶಿಕ್ಷಣ ಶೃಂಗಸಭೆಗಳು ಮತ್ತು ವಸತಿ ಕ್ಷೇಮಾಭಿವೃದ್ಧಿ ಸಂಘಗಳ ಕೂಟಗಳಂತಹ ಕಾರ್ಯಕ್ರಮಗಳು ನಿಯಮಿತವಾಗಿ ನಡೆಯುತ್ತವೆ ಎಂದರು.

SCROLL FOR NEXT