ರಾಜ್ಯ

ದಾವಣಗೆರೆ: ಚರಂಡಿ ಸ್ವಚ್ಛಗೊಳಿಸುವಾಗ ವಿಷಗಾಳಿ ಸೇವನೆ, ಇಬ್ಬರು ಕಾರ್ಮಿಕರು ಸಾವು

Sumana Upadhyaya

ದಾವಣಗೆರೆ: ಚರಂಡಿ ಸ್ವಚ್ಛಗೊಳಿಸುವಾಗ ವಿಷಗಾಳಿ ಸೇವಿಸಿ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಸವನಕೋಟೆ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಪೌರ ಕಾರ್ಮಿಕರಾದ 45 ವರ್ಷದ ದುಂಡಪ್ಪ ಮತ್ತು 42 ವರ್ಷದ ನಾಗಪ್ಪ ಎಂದು ಗುರುತಿಸಲಾಗಿದೆ.

ಯುಗಾದಿ ಹಬ್ಬದ ಹಿನ್ನೆಲೆ ಬಸವನಕೋಟೆ ಗ್ರಾಮ ಪಂಚಾಯತಿ ಪಿಡಿಒ ಶಶಿಧರ್‌ ಪಾಟೀಲ್ ಎಂಬುವವರು ಚರಂಡಿ ಸ್ವಚ್ಛಗೊಳಿಸಲು ಕಾರ್ಮಿಕರಿಗೆ ಹೇಳಿದ್ದರು. ಇದರಿಂದ ಬಹುದಿನಗಳಿಂದ ತುಂಬಿ ತುಳುಕುತ್ತಿದ್ದ ಚರಂಡಿಯ ಸ್ವಚ್ಚತೆಗೆ ಯಾವುದೇ ಮುಂಜಾಗ್ರತಾ ಕ್ರಮಗಳಿಲ್ಲದೆ ಸತ್ಯಪ್ಪ ಮತ್ತು ಮೈಲಪ್ಪ ಇಳಿದಿದ್ದರು. ಹೀಗೆ ಚರಂಡಿ ಸ್ವಚ್ಚಗೊಳಿಸುವಾಗ ವಿಷ ಗಾಳಿ ಸೇವಿಸಿ ತೀವ್ರ ಅಸ್ವಸ್ಥರಾದ ಇಬ್ಬರನ್ನೂ ಹತ್ತಿರದ ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಸ್ಥಿತಿ ಗಂಭೀರವಾದ ಹಿನ್ನೆಲೆ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಇಬ್ಬರು‌ ಪೌರಕಾರ್ಮಿಕರು ಇಂದು ಮಂಗಳವಾರ ಮೃತಪಟ್ಟಿದ್ದಾರೆ. 

ಬಹಳ ದಿನಗಳಿಂದ ಚರಂಡಿಯಲ್ಲಿ ಸರಾಗವಾಗಿ ನೀರು ಮುಂದೆ ಹರಿದುಹೋಗದ ಕಾರಣ ಅಪಾರ ಪ್ರಮಾಣದ ತ್ಯಾಜ್ಯ ಕಟ್ಟಿಕೊಂಡು ಕೊಳೆತಿದ್ದು, ವಿಷಕಾರಿ ರಾಸಾಯನಿಕ ಉತ್ಪತ್ತಿಯಾಗಿದೆ. ತೆರೆದ ಚರಂಡಿಯಲ್ಲಿ ಇಳಿದಿದ್ದ ಕಾರ್ಮಿಕರು ತಾಸುಗಟ್ಟಲೆ ಬಗ್ಗಿ ತ್ಯಾಜ್ಯ ಹೊರ ತೆಗೆಯುವ ಸಮಯದಲ್ಲಿ ವಿಷ ಗಾಳಿ ಸೇವಿಸಿ ಇಬ್ಬರೂ ಅಸ್ವಸ್ಥರಾಗಿದ್ದಾರೆ.

ಪಂಚಾಯಿತಿ ಪಿಡಿಒ ಹಾಗು ಸಿಬ್ಬಂದಿ ಚರಂಡಿ ಸ್ವಚ್ಛತಾ ಸಮಯದಲ್ಲಿ ಕೂಲಿಕಾರರ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ಕೈಗವಸು ಮತ್ತು ಮುಖ ಗವಸು ನೀಡದೆ ಏಕಾಏಕಿ ಚರಂಡಿಗೆ ಇಳಿಸಿದ್ದು, ಪಿಡಿಓ ಶಶಿಧರ್ ಪಾಟೀಲ್ ಅವರ ನಿರ್ಲಕ್ಷ್ಯದ ಕಾರಣ ಇಬ್ಬರ ಸಾವಿಗೆ ಕಾರಣವಾಗಿದೆ. ಅಧಿಕಾರಿಗಳು ತಮ್ಮ ತಪ್ಪನ್ನು ಮರೆಮಾಚುವ ಸಲುವಾಗಿ ಪ್ರಕರಣವನ್ನು ತಿರುಚುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

SCROLL FOR NEXT