ರಾಜ್ಯ

ಮಾದಕ ದ್ರವ್ಯ ವಿರುದ್ಧ ಹೋರಾಡಲು ತ್ರಿಸೂತ್ರ ಮಂಡನೆ: ಮಾದಕ ವಸ್ತು ಮತ್ತು ರಾಷ್ಟ್ರೀಯ ಭದ್ರತೆ ಸಮ್ಮೇಳನದಲ್ಲಿ ಅಮಿತ್ ಶಾ

Sumana Upadhyaya

ಬೆಂಗಳೂರು: ಮಾದಕ ವಸ್ತುಗಳ ಕಳ್ಳಸಾಗಣೆ, ಮಾರಾಟ, ಬಳಕೆ ವಿರುದ್ಧ ಹೋರಾಟದಲ್ಲಿ ಸುಧಾರಿತ ತಂತ್ರಜ್ಞಾನ ಬಳಸುವುದು ನಮ್ಮ ಮುಂದಿನ ಗುರಿಯಾಗಿರಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಅವರು ಇಂದು ಬೆಂಗಳೂರಿನಲ್ಲಿ ಮಾದಕ ದ್ರವ್ಯ ಕಳ್ಳಸಾಗಣೆ, ರಾಷ್ಟ್ರೀಯ ಭದ್ರತೆ ಕುರಿತ ದಕ್ಷಿಣ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.

ಗಾಂಜಾ, ಅಫೀಮು ಬೆಳೆಯುವ ಪ್ರದೇಶಗಳ ಗುರುತಿಸುವಿಕೆ ಮತ್ತು ನಿಯಂತ್ರಣಕ್ಕೆ ಡ್ರೋನ್, ಕೃತಕ ಬುದ್ದಿಮತ್ತೆ(AI) ಮತ್ತು ಉಪಗ್ರಹ ಮ್ಯಾಪಿಂಗ್ ಬಳಸಬೇಕು. ಮಾದಕ ದ್ರವ್ಯಗಳ ಪ್ರಕರಣಗಳನ್ನು ಅದರ ಮೂಲದಿಂದ ಅಂತಿಮ ಹಂತದವರೆಗೆ ಅದರ ಸಂಪೂರ್ಣ ಜಾಲವನ್ನು ಮಟ್ಟಹಾಕಲು ಸಂಪೂರ್ಣ ತನಿಖೆ ನಡೆಸಬೇಕು ಎಂದು ಹೇಳಿದ ಅಮಿತ್ ಶಾ ಅವರು ಮಾದಕ ದ್ರವ್ಯ ಜಾಲ ದಮನಕ್ಕೆ ತ್ರಿಸೂತ್ರವನ್ನು ಹೇಳಿದರು.

ಗೃಹ ಸಚಿವಾಲಯವು ಸಾಂಸ್ಥಿಕ ರಚನೆ, ಸಬಲೀಕರಣ ಮತ್ತು ಎಲ್ಲಾ ಮಾದಕ ದ್ರವ್ಯ ಏಜೆನ್ಸಿಗಳ ಸಮನ್ವಯ ಬಲಪಡಿಸುವ 3 ಅಂಶಗಳ ಸೂತ್ರ ಅಳವಡಿಸಿಕೊಂಡಿದೆ. ಮಾದಕ ದ್ರವ್ಯಗಳನ್ನು ಹತ್ತಿಕ್ಕಲು ಸಮಗ್ರ ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ ಎಂದರು.

ಮಾದಕ ದ್ರವ್ಯ ಕಳ್ಳಸಾಗಣೆ ಸಮಸ್ಯೆಯು ಕೇಂದ್ರ ಅಥವಾ ರಾಜ್ಯದ ಸಮಸ್ಯೆಯಲ್ಲ, ರಾಷ್ಟ್ರೀಯ ಸಮಸ್ಯೆಯಾಗಿದೆ. ಅದನ್ನು ಎದುರಿಸುವ ಪ್ರಯತ್ನಗಳು ರಾಷ್ಟ್ರೀಯವಾಗಿರಬೇಕು ಮತ್ತು ಏಕೀಕೃತವಾಗಿರಬೇಕು. ಮಾದಕ ದ್ರವ್ಯಗಳ ಹಾವಳಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಎಲ್ಲಾ ರಾಜ್ಯಗಳು ನಿಯಮಿತವಾಗಿ ಜಿಲ್ಲಾ ಮಟ್ಟದ ಮತ್ತು ರಾಜ್ಯ ಮಟ್ಟದ ರಾಷ್ಟ್ರೀಯ ನಾರ್ಕೊಟಿಕ್ಸ್ ಸಮನ್ವಯ ಪೋರ್ಟಲ್ (NCORD) ಸಭೆ ಕರೆಯಬೇಕು ಎಂದು ಸೂಚಿಸಿದರು.

SCROLL FOR NEXT