ರಾಜ್ಯ

ಹೈದರಾಬಾದ್ ವಿಮೋಚನೆಗಾಗಿ ಹೋರಾಡಿದವರನ್ನು ಕಾಂಗ್ರೆಸ್ ಎಂದಿಗೂ ನೆನಪಿಸಿಕೊಳ್ಳಲ್ಲ: ಅಮಿತ್ ಶಾ

Ramyashree GN

ಬೀದರ್: ಕ್ರೂರ ನಿಜಾಮ ಆಳ್ವಿಕೆಯಿಂದ ಹೈದರಾಬಾದ್‌ನ ವಿಮೋಚನೆಗಾಗಿ ಹೋರಾಡಿದ ಮತ್ತು ತಮ್ಮ ಪ್ರಾಣವನ್ನು ತ್ಯಾಗ ಮಾಡಿದವರನ್ನು ಕಾಂಗ್ರೆಸ್ ಎಂದಿಗೂ ನೆನಪಿಸಿಕೊಳ್ಳುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಆರೋಪಿಸಿದ್ದಾರೆ.

ಜಿಲ್ಲೆಯ ಗೋರಟಾ ಗ್ರಾಮದಲ್ಲಿ ಗೋರಟಾ ಹುತಾತ್ಮರ ಸ್ಮಾರಕ ಮತ್ತು ದೇಶದ ಮೊದಲ ಗೃಹ ಸಚಿವ ದಿವಂಗತ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯನ್ನು ಉದ್ಘಾಟಿಸಿದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾ, ಹೈದರಾಬಾದ್ ವಿಮೋಚನಾ ದಿನವನ್ನು ಆಚರಿಸಲು ಹಿಂದೇಟು ಹಾಕುತ್ತಿರುವ ಕೆ. ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. 

1948ರ ಮೇ 9ರಂದು ಗೋರಟಾದ ಭೀಕರತೆಯನ್ನು ನೆನಪಿಸಿಕೊಂಡ ಕೇಂದ್ರ ಸಚಿವರು, ದೇಶವು ಸ್ವತಂತ್ರ ಪಡೆದಾಗಲೂ ಗೋರಟಾದಲ್ಲಿ ಕ್ರೂರ ನಿಜಾಮರಿಂದ 200ಕ್ಕೂ ಹೆಚ್ಚು ಜನರನ್ನು ಕಗ್ಗೊಲೆ ಮಾಡಲಾಯಿತು. ಆದರೆ, ಅದರ ತುಷ್ಟೀಕರಣ ನೀತಿಯಿಂದಾಗಿ, ತನ್ನ ಮತ ಬ್ಯಾಂಕ್‌ಗಾಗಿ ದುರಾಸೆಗಾಗಿ ಹೈದರಾಬಾದ್ ವಿಮೋಚನೆಗಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದವರನ್ನು ಕಾಂಗ್ರೆಸ್ ಎಂದಿಗೂ ನೆನಪಿಸಿಕೊಳ್ಳಲಿಲ್ಲ ಎಂದು ಹೇಳಿದರು.

ಸರ್ದಾರ್ ಪಟೇಲ್ ಅವರಿಗೆ ನಮನ ಸಲ್ಲಿಸಿದ ಅವರು, ಪಟೇಲ್ ಇಲ್ಲದಿದ್ದರೆ ಹೈದರಾಬಾದ್ ಉದ್ಧಾರವಾಗುತ್ತಿರಲಿಲ್ಲ ಎಂದರು. ತೆಲಂಗಾಣ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಶಾ, ತೆಲಂಗಾಣ ಸರ್ಕಾರವು ಹೈದರಾಬಾದ್ ವಿಮೋಚನಾ ದಿನವನ್ನು ಆಚರಿಸಲು ಹಿಂದೇಟು ಹಾಕುತ್ತಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಈ ದಿನವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದೆ ಎಂದರು.

ಕಳೆದ ವರ್ಷ ತೆಲಂಗಾಣದಲ್ಲಿ ಬಿಜೆಪಿ ಇದನ್ನು ಆಚರಿಸಿತ್ತು ಮತ್ತು ಈ ವರ್ಷವೂ ತಾವು ಹೈದರಾಬಾದ್ ವಿಮೋಚನಾ ದಿನವನ್ನು ಆಚರಿಸುವುದಾಗಿ ತಿಳಿಸಿದರು.

ಕರ್ನಾಟಕ ಮಾತ್ರವಲ್ಲದೆ ದೇಶದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಮತ್ತು ಗೋರಟಾದ ಜನರ ಕಥೆಯನ್ನು ಹೇಳಲು ಕರ್ನಾಟಕದಲ್ಲಿ 50 ಕೋಟಿ ವೆಚ್ಚದಲ್ಲಿ ಗೋರಟಾದಲ್ಲಿ ಭವ್ಯ ಹುತಾತ್ಮರ ಸ್ಮಾರಕ ನಿರ್ಮಿಸಲು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಂತೆ ಮಾಡಿ ಎಂದು ಜನರಿಗೆ ಮನವಿ ಮಾಡಿದರು.

SCROLL FOR NEXT