ರಾಜ್ಯ

ಒಳ ಮೀಸಲಾತಿಯಿಂದ ಜನರ 40 ವರ್ಷಗಳ ಕನಸು ನನಸು ಮಾಡಿದ್ದೇವೆ, ಸ್ವಾಮೀಜಿಗಳ ಮೇಲೆ ನಾನು ಒತ್ತಡ ಹಾಕಿಲ್ಲ: ಸಿಎಂ ಬೊಮ್ಮಾಯಿ

Sumana Upadhyaya

ಬೆಂಗಳೂರು: ಯಾವ ವರ್ಗದವರಿಗೂ ಅನ್ಯಾಯವಾಗದ ರೀತಿಯಲ್ಲಿ ನ್ಯಾಯಸಮ್ಮತವಾಗಿ ಒಳ ಮೀಸಲಾತಿ ನೀಡಲಾಗಿದೆ. ಯಾವುದೇ ಒತ್ತಡದಿಂದ ಈ ಕೆಲಸ ಮಾಡಿಲ್ಲ. ನನ್ನ ಸ್ವಂತ ಚಿಂತನೆಯಿಂದ, ಬದ್ಧತೆಯಿಂದ ಮಾಡಿದ್ದೇನೆ. ಚುನಾವಣಾ ಲಾಭಕ್ಕಾಗಿ ರಾಜಕಾರಣ ಮಾಡುವುದಿಲ್ಲ, ಈ ರಾಜ್ಯದ ಜನರ 40 ವರ್ಷಗಳ ಕನಸು ನನಸು ಮಾಡಿದ್ದೇವೆ ಎಂದು ಸಿಎಂ ಬೊಮ್ಮಾಯಿ ವಿರೋಧ ಪಕ್ಷದವರಿಗೆ ತಿರುಗೇಟು ನೀಡಿದ್ದಾರೆ.

ಒಳಮೀಸಲಾತಿ ವಿಚಾರದಲ್ಲಿ ಕೇಳಿಬರುತ್ತಿರುವ ಕಾಂಗ್ರೆಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಇತರರಿಗೆ ಅನ್ಯಾಯವಾಗದಂತೆ ನ್ಯಾಯಸಮ್ಮತವಾಗಿ ಮೀಸಲಾತಿ ನೀಡಲಾಗಿದೆ. ವಚನಾನಂದ ಶ್ರೀ ಸೈದ್ಧಾಂತಿಕವಾಗಿ ಮಾರ್ಗದರ್ಶನ ಮಾಡಿದ್ದಾರೆ. ಭಿನ್ನಮತ ವ್ಯಕ್ತವಾದಾಗ ಎಲ್ಲರಿಗೂ ಮನವರಿಕೆ, ಮಾರ್ಗದರ್ಶನ ಮಾಡಿದ್ದಾರೆ. ಬಸವಜಯ ಮೃತ್ಯುಂಜಯ ಶ್ರೀಯವರು ತಮ್ಮ ದಿಟ್ಟ ಹೋರಾಟದಿಂದ ಸಮಾಜ ಹಾಗೂ ಸರ್ಕಾರದ ಮೇಲೆ ಜಾಗೃತಿ ಮೂಡಿಸಿದರು.ಸರಿಯಾದ ಸಂದರ್ಭದಲ್ಲಿ ಸರಿಯಾದ ತೀರ್ಮಾನ ಕೈಗೊಂಡಿದ್ದೇನೆ. ಇದನ್ನು ಜಾರಿಗೆ ತರಲು ಯಾರಿಗೂ ಹೆದರುವುದಿಲ್ಲ ಎಂದರು. 

ನವ ಕರ್ನಾಟಕದಲ್ಲಿ ದೀನ ದಲಿತರು ಆರ್ಥಿಕವಾಗಿ ಸಬಲರಾಗಬೇಕು. ವಿದ್ಯಾವಂತರಾಗಿ, ಸ್ವಾಭಿಮಾನದ ಬದುಕು ಬದುಕಬೇಕು ಎಂಬುದು ನಮ್ಮ ಇಚ್ಛೆ. ಹಿಂದಿನವರು ಮಾಡಿದ ಅನ್ಯಾಯ ಸರಿಪಡಿಸಲಾಗಿದೆ. ಇದು 40 ವರ್ಷಗಳ ಬೇಡಿಕೆಯಾಗಿದ್ದು, ಸಮಸ್ಯೆ ಬಗೆಹರಿಸಲಾಗಿದೆ. ಸಮುದಾಯದ ಬೆಂಬಲ ನಮ್ಮ ಮೇಲಿದೆ. ಮೀಸಲಾತಿಯ ಮೂಲಕ ಸಮುದಾಯದ ಕಟ್ಟಕಡೆಯ ಬಡವನಿಗೆ ನ್ಯಾಯ ಕೊಡುವ ಕೆಲಸ ಮಾಡಲಾಗಿದೆ ಎಂದರು.

ನಾನು ಸ್ವಾಮೀಜಿ ಮೇಲೆ ಒತ್ತಡ ಹಾಕಿಲ್ಲ: ನನ್ನ ಮೇಲೆ ಆರೋಪ ಮಾಡಿದ ಒಂದು ಪಕ್ಷದ ಅಧ್ಯಕ್ಷರಿಂದಲೇ ‘ಬಿಜೆಪಿ ಮೀಸಲಾತಿ ಕೊಟ್ಟರೆ ಒಪ್ಪಿಕೊಳ್ಳಬೇಡಿ’ ಎಂಬ ಒತ್ತಡ ಬಸವಜಯ ಮೃತ್ಯುಂಜಯ ಶ್ರೀಗಳ ಮೇಲೆ ಇತ್ತು. ಈ ಕಾರಣಕ್ಕಾಗಿ ಮೀಸಲಾತಿ ಘೋಷಣೆ ತಡವಾಯಿತು. ಸ್ವಾಮೀಜಿಗೆ ಕರೆ ಮಾಡಿ ಒತ್ತಡ ಹಾಕುವ ಕೆಲಸವನ್ನು ನಾನು ಮಾಡಿಲ್ಲ. ಆ ಕೆಲಸವನ್ನು ಯಾರು ಮಾಡಿದ್ದಾರೋ ಅವರಿಗೇ ಬಿಡುತ್ತೇನೆ’ ಎಂದು ಹೇಳಿದರು.

SCROLL FOR NEXT