ರಾಜ್ಯ

ಎಲ್ಲೆಡೆ ಶ್ರೀರಾಮನವಮಿ ಸಂಭ್ರಮ: ರಾಜ್ಯದಾದ್ಯಂತ ಆಂಜನೇಯನ ದೇಗುಲಗಳಲ್ಲಿ ರಾಮನ ಆರಾಧನೆ, ಜನತೆಗೆ ಸಿಎಂ ಬೊಮ್ಮಾಯಿ ಶುಭಾಶಯ

Manjula VN

ಬೆಂಗಳೂರು: ನಾಡಿನಾದ್ಯಂತ ಶ್ರೀ ರಾಮ ಹುಟ್ಟಿದ ದಿನವನ್ನು ಗುರುವಾರ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ರಾಜ್ಯದಾದ್ಯಂತ ಎಲ್ಲಾ ಆಂಜನೇಯನ, ರಾಮನ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗುತ್ತಿದೆ. ರಾಮನವಮಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇತರೆ ಗಣ್ಯರು ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.

ರಾಜ್ಯದಾದ್ಯಂತ ಇಂದು ಶ್ರೀರಾಮನನ್ನು ಜಪಿಸಲಾಗುತ್ತಿದ್ದು, ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗುತ್ತಿದೆ. ಇಂದು ಇಡೀ ದಿನ ಭಕ್ತರು ಉಪವಾಸ ಇದ್ದು ವ್ರತ ಮಾಡಿ ಪಾನಕ, ಕೋಸಂಬರಿ, ಮಜ್ಜಿಗೆ ಸೇವಿಸಿದರೆ ಶುಭ ಆಗುತ್ತೆ ಎನ್ನುವ ನಂಬಿಕೆಯಿದೆ. ಶ್ರೀರಾಮನವಮಿ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ದೇವಾಲಯಗಳಲ್ಲಿ ಜೈ ರಾಮ ಭಜನೆ ಮೊಳಗುತ್ತಿದೆ,

ಶ್ರೀರಾಮ ನವಮಿ ಹಿನ್ನೆಲೆಯಲ್ಲಿ ಇಂದಿನಿಂದ 2 ದಿನಗಳ ಕಾಲ ಗಾಳಿ ಆಂಜನೇಯ, ಸ್ಯಾಟಲೈಟ್ ಬಸ್ ನಿಲ್ದಾಣದ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ನಿಷೇಧವಿದೆ.

2 ದಿನಗಳ ಕಾಲ ಗಾಳಿ ಆಂಜನೇಯ ದೇಗುಲದಲ್ಲಿ ರಥೋತ್ಸವ ನಡೆಯಲಿದ್ದು, 2 ದಿನ ಪರ್ಯಾಯ ಮಾರ್ಗದಲ್ಲಿ ವಾಹನಗಳು ಸಂಚರಿಸಬೇಕಿದೆ.

ಮೈಸೂರು ಕಡೆ ಹೋಗುವವರು ಹೊಸಗುಡ್ಡದಹಳ್ಳಿ ಜಂಕ್ಷನ್ ಬಳಿ ಎಡ ತಿರುವು – ಟಿಂಬರ್ ಯಾರ್ಡ್ ಬಡಾವಣೆ ಮೂಲಕ – ಹೊಸಕೆರೆಹಳ್ಳಿ ರಸ್ತೆ ಮಾರ್ಗವಾಗಿ – ಮೈಸೂರು ಕಡೆ ಹೋಗಬಹುದಾಗಿದೆ.

ಬೆಂಗಳೂರು ಕಡೆ ಬರುವವರು ಕಿಂಕೋ ಜಂಕ್ಷನ್ ಬಳಿ ಎಡ ತಿರುವು – ಮೇಲ್ಸೇತುವೆ ಮೂಲಕ ಬಾಪೂಜಿ ಜಂಕ್ಷನ್ ಮೂಲಕ ನಗರ ಪ್ರವೇಶಿಸಬಹುದಾಗಿದೆ.

ಜನತೆಗೆ ಸಿಎಂ ಬೊಮ್ಮಾಯಿ ಶುಭಾಶಯ
ಶ್ರೀರಾಮನವಮಿ ಹಬ್ಬ ಹಿನ್ನೆಲೆಯಲ್ಲಿ ನಾಡಿನ ಜನತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶುಭಾಶಯಗಳನ್ನು ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ನಾಡಿನ ಸಮಸ್ತ ಜನತೆಗೆ ಶ್ರೀ ರಾಮ ನವಮಿಯ ಹಾರ್ದಿಕ ಶುಭಾಶಯಗಳು ಎಂದು ಹೇಳಿದ್ದಾರೆ.

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ. ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ. ನಿನ್ನಿಷ್ಟದಂತೆನ್ನ ಇಟ್ಟಿರುವೆ ರಾಮ. ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ.. ನಾಡಿನ ಸಮಸ್ತ ಜನತೆಗೆ ಶ್ರೀ ಮರ್ಯಾದಾ ಪುರುಷೋತ್ತಮ, ಶ್ರೀ ರಾಮನವಮಿಯ ಹಾರ್ದಿಕ ಶುಭಾಶಯಗಳು. ಪ್ರಭು ರಾಮಚಂದ್ರ ಸರ್ವರ ಬಾಳಿನಲ್ಲಿ ಒಳಿತನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆಂದು ತಿಳಿಸಿದ್ದಾರೆ.

SCROLL FOR NEXT