ರಾಜ್ಯ

ಬೆಳಗಾವಿ ರಿಂಗ್ ರೋಡ್ ಯೋಜನೆ ಕಾಮಗಾರಿ ಜಿಆರ್ ಇನ್‌ಫ್ರಾ ಲಿಮಿಟೆಡ್‌ ಪಾಲು!

Srinivasamurthy VN

ಬೆಳಗಾವಿ: ಬೆಳಗಾವಿ ನಗರಕ್ಕೆ 4/6 ಲೇನ್ ಬೈಪಾಸ್ ರಸ್ತೆ ನಿರ್ಮಾಣಕ್ಕಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ (ಎನ್‌ಎಚ್‌ಎಐ) ರಿಂಗ್ ರೋಡ್ ಯೋಜನೆಯನ್ನು ಜಿಆರ್ ಇನ್‌ಫ್ರಾಪ್ರಾಜೆಕ್ಟ್ಸ್ ಕಂಪನಿಗೆ ನೀಡಲಾಗಿದ್ದು, ನಿಗದಿತ ದಿನಾಂಕದಿಂದ 912 ದಿನಗಳಲ್ಲಿ ಯೋಜನೆಯ ಕೆಲಸವನ್ನು ಪೂರ್ಣಗೊಳಿಸಲು ಗಡುವು ನೀಡಲಾಗಿದೆ.

ವರ್ತುಲ ರಸ್ತೆ ಕಾಮಗಾರಿ ಗುತ್ತಿಗೆ ನೀಡಲು ಪ್ರಾಧಿಕಾರವು 1,083.45 ಕೋಟಿ ರೂ.ಗಳ ಟೆಂಡರ್‌ ಕರೆದಿತ್ತು. ಆರು ಕಂಪನಿಗಳು ಟೆಂಡರ್‌ಗಳನ್ನು ಸಲ್ಲಿಸಿದ್ದು, ಅದರಲ್ಲಿ ಜಿಆರ್ ಇನ್‌ಫ್ರಾ ಲಿಮಿಟೆಡ್‌ಗೆ ಸೇರಿದ 897 ಕೋಟಿ 37 ಲಕ್ಷ ರೂಗಳ ಟೆಂಡರ್ ಅರ್ಜಿ ಆಯ್ಕೆಯಾಗಿದೆ.

ಫಲವತ್ತಾದ ಭೂಮಿಗೆ ಬೇಡಿಕೆಯಿರುವ ರಿಂಗ್ ರೋಡ್ ಯೋಜನೆಗೆ ರೈತರು ವಿರೋಧ ವ್ಯಕ್ತಪಡಿಸಿ ಹಲವು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು. ಈ ಯೋಜನೆಗಾಗಿ 31 ಹಳ್ಳಿಗಳ ರೈತರ ಸುಮಾರು 1,272-ಎಕರೆ ಫಲವತ್ತಾದ ಭೂಮಿ ಒಳಗೊಳ್ಳಲಿದೆ. ಪ್ರಸ್ತಾವಿತ ರಿಂಗ್ ರೋಡ್ ಯೋಜನೆ ಜಾರಿಯಾದರೆ ಅಗಸಗೆ, ಅಂಬೇವಾಡಿ, ಬಾಚಿ, ಭಾದರವಾಡಿ, ಬೆಳಗುಂದಿ, ಬಿಜಗರ್ಣಿ, ಗೊಜಗೆ, ಹೊಂಗ, ಕಡೋಲಿ, ಕಾಕತಿ, ಕಲಕಂಬ, ಕಲ್ಲೇಹೊಳ, ಕಾಮಕರಟ್ಟಿ, ಕಣಬರ್ಗಿ, ಕೊಂಡಸಕೊಪ್ಪ, ಮಣ್ಣೂರ ಮತ್ತಿತರ ಗ್ರಾಮಗಳ ರೈತರ ಫಲವತ್ತಾದ ಭೂಮಿ ಬೆಳಗಾವಿ ತಾಲೂಕಿನ ಹಳ್ಳಿಗಳು ಕಳೆದು ಹೋಗುತ್ತವೆ ಎನ್ನಲಾಗಿದೆ.

ರೈತರ ಆರೋಪಿಸಿರುವಂತೆ, ರೈತರ ಫಲವತ್ತಾದ ಭೂಮಿಯನ್ನು ಉಳಿಸಲು ಮೇಲ್ಸೇತುವೆ ಸ್ಥಾಪನೆಯಂತಹ ಆಯ್ಕೆಗಳು ಸರ್ಕಾರಕ್ಕೆ ಇವೆ. ರಿಂಗ್ ರೋಡ್ ಯೋಜನೆಗಾಗಿ ತಮ್ಮ ಫಲವತ್ತಾದ ಭೂಮಿಯನ್ನು ಕಳೆದುಕೊಳ್ಳುವ ನಿರೀಕ್ಷೆಯಲ್ಲಿರುವ ಹೆಚ್ಚಿನವರು ಬಡ ಅಥವಾ ಮಧ್ಯಮ ವರ್ಗದ ಕುಟುಂಬಗಳಿಗೆ ಸೇರಿದವರು ಎಂದು ಅವರು ಹೇಳಿದರು. ಸ್ವಾಧೀನಪಡಿಸಿಕೊಳ್ಳಲಿರುವ ಜಮೀನುಗಳು ಫಲವತ್ತಾದ ಭೂಮಿಯಾಗಿದ್ದು, ರೈತರು ವಾಣಿಜ್ಯ ಬೆಳೆಗಳಾದ ಕಬ್ಬು, ಆಲೂಗಡ್ಡೆ, ಸಿಹಿ ಗೆಣಸು, ಭತ್ತ, ತರಕಾರಿಗಳು, ದ್ವಿದಳ ಧಾನ್ಯಗಳನ್ನು ಬೆಳೆಯುತ್ತಾರೆ. ಪ್ರತಿಯೊಬ್ಬ ರೈತರು ಸರಾಸರಿ ಒಂದರಿಂದ ಮೂರು ಎಕರೆ ಜಮೀನು ಕೃಷಿಗಾಗಿ ಹೊಂದಿಲ್ಲ ಎಂದು ಅವರು ಹೇಳಿದರು.

ಖಾನಾಪುರ ಹೆದ್ದಾರಿ ವಿಸ್ತರಣೆಗಾಗಿ ಎನ್‌ಎಚ್‌ಎಐ ಈಗಾಗಲೇ ಜಡಶಹಾಪುರದಲ್ಲಿ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ರಿಂಗ್ ರೋಡ್ ಮತ್ತು ಟ್ರಕ್ ಟರ್ಮಿನಲ್ ಯೋಜನೆಗೆ ಹೆಚ್ಚಿನ ಭೂಮಿ ಸ್ವಾಧೀನಪಡಿಸಿಕೊಂಡರೆ ಇಡೀ ಗ್ರಾಮವೇ ಕಣ್ಮರೆಯಾಗುತ್ತದೆ ಎಂಬುದು ರೈತರ ಆರೋಪ. ಜಿಆರ್ ಇನ್ಫ್ರಾ ಲಿಮಿಟೆಡ್ ಶೀಘ್ರದಲ್ಲೇ ವರ್ತುಲ ರಸ್ತೆ ಯೋಜನೆ ಕಾಮಗಾರಿಯನ್ನು ಪ್ರಾರಂಭಿಸಲಿದೆ ಎಂಬ ಸುದ್ದಿಯೊಂದಿಗೆ, ರೈತರು ಮತ್ತೆ ಅದರ ವಿರುದ್ಧ ಆಂದೋಲನವನ್ನು ಪ್ರಾರಂಭಿಸಲು ಸಜ್ಜಾಗಿದ್ದಾರೆ.

SCROLL FOR NEXT