ರಾಜ್ಯ

ಪರವಾನಗಿ ಇಲ್ಲದೆ ಗರ್ಭಪಾತ: ಸೂಲಗಿತ್ತಿ ಬಂಧನ

Manjula VN

ತುಮಕೂರು: ಪರವಾನಗಿ ಇಲ್ಲದೆ ಮನೆಯಲ್ಲಿ ಗರ್ಭಪಾತ, ಹೆರಿಗೆ ಮಾಡಿಸುತ್ತಿದ್ದ ಸೂಲಗಿತ್ತಿಯೊಬ್ಬರನ್ನು ತುಮಕೂರು ಜಿಲ್ಲೆಯ ಶಿರಾದಲ್ಲಿ ಬಂಧನಕ್ಕೊಳಪಡಿಸಲಾಗಿದೆ.

ಬಂಧಿತ ಮಹಿಳೆಯನ್ನು ಸೌಜನ್ಯಾ ಎಂದು ಗುರ್ತಿಸಲಾಗಿದೆ. ಮಾಹಿತಿ ತಿಳಿದ ಬಳಿಕ ಸ್ಥಳಕ್ಕೆ ಭೇಟಿ ನೀಡಲಾಗಿತ್ತು. ಈ ವೇಳೆ ಸ್ಥಳದಲ್ಲಿ ಯಾವುದೇ ರೀತಿಯ ಗರ್ಭಪಾತಗಳು ನಡೆಯುತ್ತಿರಲಿಲ್ಲ. ಆದರೆ, ಹಲವಾರು ಔಷಧಿಗಳು, ಎಂಟಿಪಿ ಕಿಟ್ ಗಳು. ಮೆಡಿಕಲ್ ರಿಪೋರ್ಟ್, ಸ್ಯಾನಿಟರಿ ನ್ಯಾಪ್ ಕಿನ್ ಗಳು ಸೇರಿ ಹಲವು ವಸ್ತುಗಳು ಪತ್ತೆಯಾಗಿದ್ದವು ಎಂದು ಕರ್ನಾಟಕ ರಾಜ್ಯ ಸಮಗ್ರ ಗರ್ಭಪಾತ ಸೇವೆಯ ನೋಡಲ್ ಅಧಿಕಾರಿ ಡಾ.ಚಂದ್ರಿಕಾ ಬಿ.ಆರ್ ಅವರು ಹೇಳಿದ್ದಾರೆ.

ಸಣ್ಣ ಕೊಠಡಿಯಲ್ಲಿ ಮಹಿಳೆ ಪರವಾನಗಿ ಇಲ್ಲದೆ, ವೈದ್ಯಕೀಯ ಪ್ರಕ್ರಿಯೆಗಳನ್ನು ನಡೆಸಿರುವುದಾಗಿ ತಿಳಿದುಬಂದಿದ್ದು, ಈ ಸಂಬಂಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಅನಧಿಕೃತ ಗರ್ಭಪಾತ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿವೆ. ಅನಗತ್ಯ ಗರ್ಭಧಾರಣೆ ಹೊಂದಿದ ಮಹಿಳೆಯರು ಭಯದಿಂದ ಇಂತಹ ಕ್ಲಿನಿಕ್ ಗಳಿಗೆ ಭೇಟಿ ನೀಡುತ್ತಾರೆ. ಅನಧಿಕೃತ ಗರ್ಭಪಾತಗಳು ಸಾವಿಗೆ ಕಾರಣವಾಗಬಹುದು. ಶಾಶ್ವತ ಸೋಂಕುಗಳು, ಬಂಜೆತನ ಮತ್ತು ಗಂಭೀರ ಕಾಯಿಲೆಗಳ ಹರಡುವಿಕೆಯಂತಹ ರೋಗಗಳಿಗೆ ಇದು ಕಾರಣವಾಗಬಹುದು ಎಂದು ಹೇಳಿದ್ದಾರೆ.

ಗರ್ಭಪಾತದ ಪ್ರಕರಣಗಳಲ್ಲಿ 1971ರ ವೈದ್ಯಕೀಯ (ಎಂಟಿಪಿ) ಕಾಯಿದೆಯ ಪ್ರಕಾರ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂದು ಕರ್ನಾಟಕ ಆರೋಗ್ಯ ಇಲಾಖೆ ಹೇಳಿದೆ.

ಆದ್ದರಿಂದ ಮಹಿಳೆಯರು ತಮ್ಮ ಆರೋಗ್ಯಕ್ಕೆ ಆದ್ಯತೆ ನೀಡಬೇಕಿದ್ದು, ನೋಂದಾಯಿತ ವೈದ್ಯಕೀಯ ವೃತ್ತಿಪರರಿಂದ ಮಾತ್ರ ಗರ್ಭಪಾತದ ಸೇವೆಗಳನ್ನು ಪಡೆಯಬೇಕು ಎಂದು ವೈದ್ಯರು ತಿಳಿಸಿದ್ದಾರೆ.

SCROLL FOR NEXT