ರಾಜ್ಯ

ಚಿಕ್ಕಮಗಳೂರು: ಹಸೆಮಣೆ ಏರುವ ಮುನ್ನ ಮತಚಲಾಯಿಸಿದ ಮದುಮಗಳು

Srinivasamurthy VN

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಮದುಮಗಳೊಬ್ಬರು ಹಸೆಮಣೆ ಏರುವ ಮುನ್ನ ಮತದಾನ ಮಾಡುವ ಮೂಲಕ ಹಕ್ಕು ತಮ್ಮ ಚಲಾಯಿಸಿದ್ದಾರೆ. 

ರಾಜ್ಯ ವಿಧಾನಸಭಾ ಚುನಾವಣಾ ಮತದಾನ ಇಂದು (ಬುಧವಾರ) ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದ್ದು, ರಾಜ್ಯಾದ್ಯಂತ ಮತದಾನ ಬಿರುಸಿನಿಂದ ಸಾಗಿದೆ.  ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಮದುಮಗಳು ಮತಚಲಾಯಿಸಿದ್ದು ವಿಶೇಷವಾಗಿತ್ತು. 

ಮೂಡಿಗೆರೆಯಲ್ಲಿ ಮದುವೆ ಇರುವ ಹಿನ್ನೆಲೆ ಹಸೆಮಣೆ ಏರುವ ಮೊದಲೇ ಕುಟುಂಬದ ಸದಸ್ಯರ ಜೊತೆಗೆ ಮದುಮಗಳು ಮತಗಟ್ಟೆಗೆ ಆಗಮಿಸಿ ಮತಚಲಾಯಿಸಿದ್ದಾರೆ. ಹಸೆಮಣೆಗೂ ಮುನ್ನ ತಮ್ಮ ಜವಾಬ್ದಾರಿ ಮೆರೆದ ಮಧುಮಗಳು ಮದುವೆ ಸಂದರ್ಭದಲ್ಲೂ ಮತದಾನ ಮಾಡಿ ಇತರರಿಗೆ ಸ್ಫೂರ್ತಿಯಾಗಿದ್ದಾರೆ.

ಇನ್ನೂ ಉಡುಪಿ ಜಿಲ್ಲೆಯ ಕಾಪು ವಿಧಾನ ಸಭಾ ಕ್ಷೇತ್ರದಲ್ಲಿ ಫಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 187 ರಲ್ಲಿ ನವ ವಧು ಕು.ಮೇಲಿಟಾ ಅವರು ಮತ ಚಲಾಯಿಸಿದ್ದಾರೆ. ಅಂತೆಯೇ ಬೆಂಗಳೂರಿನ ಚಿಕ್ಕಪೇಟೆ ಕ್ಷೇತ್ರದಲ್ಲಿ 5 ತಿಂಗಳ ಅವಳಿ ಮಕ್ಕಳೊಂದಿಗೆ ಮತಗಟ್ಟೆಗೆ ಬಂದ ದಂಪತಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಪಿರಿಯಾಪಟ್ಟಣದಲ್ಲಿ ನೂತನ ವಧು ವರರು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಪಿರಿಯಾಪಟ್ಟಣದಲ್ಲಿ ಮದುಮಗ ಬಿಪಿನ್ ಕೆ ಎನ್, ಪತ್ನಿ ಅಕ್ಷತಾ ಪಿ ಜೊತೆಗೆ ಮತಗಟ್ಟೆಗೆ ಆಗಮಿಸಿದರು. ಇವರೊಂದಿಗೆ ಬಿಪಿನ್​ರವರ ತಂದೆ ಕೆಎಸ್ ನಾಗೇಂದ್ರ ತಾಯಿ ಸಿಎಸ್ ಗೀತಾ ಆಗಮಿಸಿ ಮೂರು ಜನ ಮತದಾನ ಮಾಡಿದರು.

ಮತ ಚಲಾಯಿಸಿದ 105 ವರ್ಷದ ಅಜ್ಜಿ
ಯಾದಗಿರಿ ಜಿಲ್ಲೆಯ ಶಹಾಪುರ‌ ಮತಕ್ಷೇತ್ರ ನಗನೂರ ಗ್ರಾಮದಲ್ಲಿ ಶತಾಯುಷಿ ಅಜ್ಜಿ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ. ದೇವಕ್ಕಮ್ಮ (105) ಮೊಮ್ಮಗನ ಜೊತೆ ಕಾರಿನಲ್ಲಿ ಬಂದು ಮತ ಚಲಾಯಿಸಿದ್ದಾರೆ.

ಹಕ್ಕು ಚಲಾಯಿಸಿದ ವೀರೇಂದ್ರ ಹೆಗಡೆ
ಕುಟುಂಬ ಸಮೇತ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಮಂಜುನಾಥೇಶ್ವರ ಅನುಧಾನಿಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ಮತದಾನ ಮಾಡಿದ್ದಾರೆ.
 

SCROLL FOR NEXT