ರಾಜ್ಯ

ವಿಧಾನಸಭೆ ಚುನಾವಣೆ: ಕೆಲವು ಅಹಿತಕರ ಘಟನೆ ಹೊರತುಪಡಿಸಿ ಮತದಾನ ಬಹುತೇಕ ಶಾಂತಿಯುತ

Sumana Upadhyaya

ಬೆಂಗಳೂರು: ವಿಧಾನಸಭೆ ಚುನಾವಣಾ ಕಣದಲ್ಲಿರುವ ಕರ್ನಾಟಕದಲ್ಲಿ ವಿಜಯಪುರ, ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಕೆಲವು ಅಹಿತಕರ ಘಟನೆಗಳನ್ನು ಹೊರತುಪಡಿಸಿ ಮತದಾನ ಬಹುತೇಕ ಶಾಂತಿಯುತವಾಗಿದೆ. ಮಧ್ಯಾಹ್ನ 1 ಗಂಟೆಯವರೆಗೆ ರಾಜ್ಯದಲ್ಲಿ ಶೇಕಡಾ 37.25 ರಷ್ಟು ಚುರುಕಾದ ಮತದಾನವಾಗಿದೆ.

ವಿಜಯಪುರದ ಮಸಬಿನಾಳ್‌ ಗ್ರಾಮದಲ್ಲಿ ಗುಂಪೊಂದು ವಿದ್ಯುನ್ಮಾನ ಮತಯಂತ್ರ (EVM) ಮತ್ತು ವಿವಿಪ್ಯಾಟ್‌ಗಳನ್ನು ಒಡೆದು ಹಾಕಿರುವ ಘಟನೆ ನಡೆದಿದೆ. ಹೆಚ್ಚುವರಿ ಇವಿಎಂ ಯಂತ್ರಗಳು ಮತ್ತು ವಿವಿಪ್ಯಾಟ್‌ಗಳನ್ನು ಕಾರಿನಲ್ಲಿ ಸಾಗಿಸಲಾಗುತ್ತಿದ್ದು, ಮತದಾನ ಮುಗಿದಿದೆ ಎಂದು ಸುಳ್ಳು ಮಾಹಿತಿ ನೀಡಿದ್ದರಿಂದ ಕೋಪಗೊಂಡ ಗ್ರಾಮಸ್ಥರು ಕಾರನ್ನು ನಿಲ್ಲಿಸಿ ಇವಿಎಂಗಳನ್ನು ಒಡೆದು ಹಾಕಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಪೊಲೀಸರು ನಂತರ ಶಾಂತಿಯುತವಾಗಿ ಮತದಾನ ನಡೆಯುವಂತೆ ನೋಡಿಕೊಂಡರು. ಈ ಸಂಬಂಧ ಪೊಲೀಸರು 20ರಿಂದ 25 ಮಂದಿಯನ್ನು ಬಂಧಿಸಿದ್ದಾರೆ.

ಇದೇ ವೇಳೆ ಮತದಾನ ಮಾಡಲು ಕರೆತಂದಿದ್ದ ಚಿಂಚೋಳಿಯ ನಕಲಿ ಮತದಾರರು ಕಾಂಗ್ರೆಸ್ ಕಾರ್ಯಕರ್ತರ ಕೈಗೆ ಸಿಕ್ಕಿಬಿದ್ದಿದ್ದಾರೆ. ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಕಲಿ ಮತದಾರರನ್ನು ಕರೆತಂದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದ್ದರೆ, ನಕಲಿ ಮತದಾರರು ಎನ್ನಲಾದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾಂಗ್ರೆಸ್ ಕಾರ್ಯಕರ್ತರು ಅವರಿಂದ ಹಲವು ನಕಲಿ ಗುರುತಿನ ಚೀಟಿಗಳನ್ನು ವಶಪಡಿಸಿಕೊಂಡಿದ್ದು, ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಿದ್ದಾರೆ.

ಬೆಳಗಾವಿಯ 70 ವರ್ಷದ ಪಾರವ್ವ ಈಶ್ವರಪ್ಪ ಸಿದ್ನಾಳ್ ಅವರು ಸೌಂದತ್ತಿ ಕ್ಷೇತ್ರದ ಯರಜರ್ವಿಯಲ್ಲಿ ಮತದಾನ ಮಾಡಲು ಬಂದಿದ್ದಾಗ ರಕ್ತದೊತ್ತಡ ಕಡಿಮೆಯಾಗಿ ಮೃತಪಟ್ಟಿದ್ದಾರೆ. ಬೆಳಗ್ಗೆ 10.30ರ ಸುಮಾರಿಗೆ ಮತಗಟ್ಟೆ ಆವರಣದಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. 

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಸಚಿವ ವಿ ಸೋಮಣ್ಣ ಅವರು ಪರಿಸ್ಥಿತಿ ಅವಲೋಕಿಸಲು ಮತಗಟ್ಟೆ ಬಳಿ ಹೋದಾಗ ಕಾಂಗ್ರೆಸ್ ಕಾರ್ಯಕರ್ತರ ನೂಕುನುಗ್ಗಲು ಎದುರಿಸಬೇಕಾಯಿತು. ಪೊಲೀಸರು ಮಧ್ಯ ಪ್ರವೇಶಿಸಿ ಸಮಾಧಾನಪಡಿಸಿದರು. ಇದೇ ವೇಳೆ ಚಿತ್ರದುರ್ಗದ ಹಿರಿಯೂರು ತಾಲೂಕಿನ ಪಿಳ್ಳಳ್ಳಿ ಗ್ರಾಮದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಘರ್ಷಣೆ ನಡೆದಿದೆ.

SCROLL FOR NEXT