ರಾಜ್ಯ

Karnataka CM: ಬರ್ತಡೇ ಬಾಯ್ ಡಿಕೆ ಶಿವಕುಮಾರ್ ಗೆ ಸಿಗುತ್ತಾ ಸಿಹಿ ಸುದ್ದಿ, ಸಂಜೆಯೊಳಗೆ ನಿರ್ಧಾರ ಸಾಧ್ಯತೆ!

Srinivasamurthy VN

ಬೆಂಗಳೂರು: ಜನ್ಮದಿನಾಚರಣೆಯ ಸಂಭ್ರಮದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಇಂದೇ ಕಾಂಗ್ರೆಸ್ ಹೈಕಮಾಂಡ್ ಸಿಹಿಸುದ್ದಿ ನೀಡಲಿದೆಯೇ ಎಂಬ ಕುತೂಹಲ ಗರಿಗೆದರಿದೆ.

ಹೌದು.. ಕರ್ನಾಟಕ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರಾಗ್ತಾರೆ ಎಂಬ ಕುತೂಹಲ ಹೆಚ್ಚಾಗಿದ್ದು, ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ತಾರಾ, ಅಥವಾ ಇಂದು ಜನ್ಮದಿನಾಚರಣೆಯ ಸಂಭ್ರಮದಲ್ಲಿರುವ ಡಿಕೆ ಶಿವಕುಮಾರ್ ಅವರಿಗೆ ಒಲಿಯುತ್ತಾ ಅದೃಷ್ಟ ಎಂಬುದು ಕದನ ಕುತೂಹಲಕಾರಿಯಾಗಿದೆ.  ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ 62ನೇ ವರ್ಷದ ಜನ್ಮದಿನ ಹಿನ್ನೆಲೆಯಲ್ಲಿ ನಿನ್ನೆ (ಮೇ 15, ಭಾನುವಾರ) ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಪ್ರಮುಖರು ಡಿಕೆಶಿ ಅವರನ್ನು ಭೇಟಿ ಮಾಡಿ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿದ್ದಾರೆ. ಡಿಕೆಶಿ ಶಿವಕುಮಾರ್ ತಮ್ಮ ಟ್ವಿಟರ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇನ್ನು ದೆಹಲಿ ಭೇಟಿ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಡಿಕೆ ಶಿವಕುಮಾರ್, 'ದೆಹಲಿಗೆ ಹೋಗಬೇಕೋ ಬೇಡವೋ ಎಂದು ಇನ್ನೂ ನಿರ್ಧರಿಸಿಲ್ಲ.. ಏಕೆಂದರೆ ನನ್ನ ಜನ್ಮದಿನದ ನಿಮಿತ್ತ ರಾಜ್ಯದಾದ್ಯಂತ ಸಾಕಷ್ಟು ಜನರು ಬರುತ್ತಿದ್ದಾರೆ ಮತ್ತು ಇಂದು ನನ್ನ ಜನ್ಮದಿನವಾದ್ದರಿಂದ ನನ್ನ ಮನೆಯಲ್ಲಿ ಸಣ್ಣ ಆಚರಣೆಗಳಿವೆ. ಕೆಲವು ಪೂಜೆ ಮತ್ತು ನಾನು ಕೆಲವು ದೇವಾಲಯಗಳಿಗೆ ಹೋಗಬೇಕಾಗಿದೆ.. ಈಗಾಗಲೇ ನಾವು ಒಂದು ಸಾಲಿನ ನಿರ್ಣಯವನ್ನು ಅಂಗೀಕರಿಸಿದ್ದೇವೆ, ಅದನ್ನು ಪಕ್ಷದ ಹೈಕಮಾಂಡ್‌ಗೆ ಬಿಡುತ್ತೇವೆ ಎಂದು ಅವರು ಹೇಳಿದರು

ದೆಹಲಿ ಅಂಗಳದಲ್ಲಿ ಚೆಂಡು
ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಆಯ್ಕೆ ವಿಚಾರ ಇದೀಗ ದೆಹಲಿ ಅಂಗಳ ತಲುಪಿದ್ದು, ರಾಜ್ಯದ ಮುಖ್ಯಮಂತ್ರಿ ರೇಸ್‌ನಲ್ಲಿ ಪ್ರಮುಖವಾಗಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಕೆ ಶಿವಕುಮಾರ್ (DK Shivakumar) ಇದ್ದು, ಇಂದು (ಮೇ 15, ಸೋಮವಾರ) ಸಂಜೆಯೊಳಗೆ ಇಬ್ಬರು ನಾಯಕರನ್ನು ದೆಹಲಿಗೆ ಕರೆಸಿಕೊಳ್ಳುವ ಸಾಧ್ಯತೆ ಇದೆ.

ನಿನ್ನೆ ನಡೆದಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ನಿರ್ಧಾರವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡುವ ಸರ್ವಾನುಮತದ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಹೀಗಾಗಿ ಸಂಜೆಯೊಳಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಲಾಗುತ್ತದೆ. ಎಲ್ಲವೂ ಅಂದುಕೊಂಡರೆ ನಡೆದರೆ ಮೇ 18ಕ್ಕೆ ರಾಜ್ಯದ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಸಮಾನಮನಸ್ಕ ಪಕ್ಷಗಳ ನಾಯಕರನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಲಿದ್ದಾರೆ.

ದೆಹಲಿಯಲ್ಲಿಂದು ಕರ್ನಾಟಕ ಸಿಎಂ ವಿಚಾರವಾಗಿ ಚರ್ಚೆಗೆ ನಡೆಯಲಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ರಾಜ್ಯದ ಪ್ರಮುಖ ನಾಯಕರು ಭೇಟಿಯಾಗುವ ಸಾಧ್ಯತೆ ಇದೆ.
 

SCROLL FOR NEXT