ರಾಜ್ಯ

ಐಟಿ ಮರುಪಾವತಿ ಹಗರಣ: ಸೈಬರ್ ಪೊಲೀಸರಿಂದ ಇಂಜಿನಿಯರಿಂಗ್ ಪದವೀಧರ ಬಂಧನ

Nagaraja AB

ಬೆಂಗಳೂರು: ಕೆಲವು ಸರ್ಕಾರಿ ವೆಬ್‌ಸೈಟ್‌ಗಳಿಂದ ಸೂಕ್ಷ್ಮ ಮಾಹಿತಿ ಪಡೆದು ಭಾರಿ ಮೊತ್ತದ ಹಣವನ್ನು ದೋಚಿದ್ದಕ್ಕಾಗಿ ಬೆಂಗಳೂರಿನ ಸಿಐಡಿ ಸೈಬರ್ ಕ್ರೈಂ ವಿಭಾಗದ ಪೊಲೀಸರು 32 ವರ್ಷದ ಇಂಜಿನಿಯರಿಂಗ್ ಪದವೀಧರನನ್ನು ಬಂಧಿಸಿದ್ದಾರೆ.

ಆರೋಪಿ ಆದಾಯ ತೆರಿಗೆ ಇಲಾಖೆ ಸಾಫ್ಟ್‌ವೇರ್‌ನಲ್ಲಿನ ದೋಷಗಳನ್ನು ದುರ್ಬಳಕೆ ಮಾಡಿಕೊಂಡಿದ್ದು,  ಭಾರಿ ಮೊತ್ತದ ಐಟಿ ಮರುಪಾವತಿ ಹಣವನ್ನು ವಂಚಿಸಿದ್ದಾರೆ ಎಂದು ವರದಿಯಾಗಿದೆ. ಆರೋಪಿಯನ್ನು ಹಾಸನ ಜಿಲ್ಲೆಯ ಹಿರಿಸಾವೆ ಗ್ರಾಮದ ದಿಲೀಪ್ ರಾಜೇಗೌಡ ಎಂದು ಗುರುತಿಸಲಾಗಿದ್ದು, ಆತನನ್ನು ಧಾರವಾಡದಲ್ಲಿ ಬಂಧಿಸಲಾಗಿದೆ.

ರಾಜೇಗೌಡ  ಆಸ್ತಿ ನೋಂದಣಿಗೆ ಸಂಬಂಧಿಸಿದ ರಾಜ್ಯ ಸರ್ಕಾರದ ಕಾವೇರಿ ಆನ್‌ಲೈನ್ ಪೋರ್ಟಲ್ ನ್ನು ಸಹ  ಹ್ಯಾಕ್ ಮಾಡಿ ಕೆಲವು ವಹಿವಾಟು ನಡೆಸಿದ್ದಾನೆ. ಆರೋಪಿಯ ವಿರುದ್ಧ ಕರ್ನಾಟಕವಲ್ಲದೆ ಮಹಾರಾಷ್ಟ್ರ, ಗೋವಾ ಮತ್ತು ತೆಲಂಗಾಣದಲ್ಲಿ ಪ್ರಕರಣಗಳು ದಾಖಲಾಗಿವೆ. ಈತ ಹಲವು ವಾಹನ ಸಾಲ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಫೈನಾನ್ಸ್ ಕಂಪನಿಗೆ ಭಾರಿ ಮೊತ್ತದ ಹಣ ವಂಚಿಸಿದ್ದ ಎನ್ನಲಾಗಿದೆ.

ಸೈಬರ್ ಕ್ರೈಂ ಪೊಲೀಸರು ಆರೋಪಿ ವಿರುದ್ಧ ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. “ಆದಾಯ ತೆರಿಗೆ ಇಲಾಖೆಯು ಮರುಪಾವತಿ ಮಾಡಿದ ಬ್ಯಾಂಕ್ ಖಾತೆಗಳ ವಿವರಗಳನ್ನು  ಪಡೆದಿರುವ ಆರೋಪಿ, ನಕಲಿ ಕೆವೈಸಿ ದಾಖಲೆಗಳನ್ನು ಬಳಸಿ ಸಂತ್ರಸ್ತರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರಿದಿದ್ದಾನೆ.

ಪ್ರಸ್ತುತ ಪ್ರಕರಣದಲ್ಲಿ ಆರೋಪಿಯು ಐಟಿ ರಿಟರ್ನ್ಸ್ ದುರ್ಬಳಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, 1.41 ಕೋಟಿ ರೂಪಾಯಿ ಮರು ಪಾವತಿ ಹಣವನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ ಎಂದು  ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆರೋಪಿ ಇನ್ನೂ ಆರು ಪ್ರಕರಣಗಳಲ್ಲಿ ಭಾಗಿಯಾಗಿದ್ದು, 3.6 ಕೋಟಿ ರೂ. ವಂಚಿಸಿದ್ದಾನೆ. ಇನ್ನು ಹೆಚ್ಚಿನ ತನಿಖೆಗಾಗಿ ರಾಜೇಗೌಡ ಪೊಲೀಸ್ ಕಸ್ಟಡಿಯಲ್ಲಿದ್ದು, ಆತನಿಂದ ಪ್ರಕರಣಕ್ಕೆ ಸಂಬಂಧಿಸಿದ ಡಿಜಿಟಲ್ ಮತ್ತು ಇತರ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

SCROLL FOR NEXT