ರಾಜ್ಯ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕಟೀಲ್‌ ಬದಲಾವಣೆ: ಸುಳಿವು ನೀಡಿದ ಪ್ರಹ್ಲಾದ್ ಜೋಶಿ

Manjula VN

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರ ಬದಲಾವಣೆ ಸಾಧ್ಯತೆ ಕುರಿತು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಅವರು ಸುಳಿವು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮಂಗಳವಾರ ಮಾತನಾಡಿದ ಜೋಶಿ ಅವರು, ನಳಿನ್ ಕುಮಾರ್ ಕಟೀಲ್ ಅವರು ರಾಜ್ಯಾಧ್ಯಕ್ಷ ಹುದ್ದೆಯ ಅವಧಿ ಪೂರೈಸಿದ್ದರೂ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ನಾಯಕರು ಮತ್ತೆ ಅವರಿಗೆ ಜವಾಬ್ದಾರಿ ನೀಡಿದ್ದರು. ಈಗ ಚುನಾವಣೆ ಮುಗಿದಿದೆ. ಮುಂದಿನ ತೀರ್ಮಾನವನ್ನು ರಾಷ್ಟ್ರೀಯ ನಾಯಕರು ತೆಗೆದುಕೊಳ್ಳುತ್ತಾರೆಂದು ಹೇಳಿದರು.

ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ನಿರಾಶಾದಾಯಕವಾಗಿದೆ. ಈ ಸೋಲನ್ನು ಪಕ್ಷ ಹಾಗೂ ನಾನು ಸಹಜವಾಗಿ ಸ್ವೀಕರಿಸದೆ ಸವಾಲಾಗಿ ಸ್ವೀಕರಿಸಿದ್ದೇವೆ. ಮುಂಬರುವ ಲೋಕಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ಶುರು ಮಾಡುತ್ತೇವೆ ಎಂದು ತಿಳಿಸಿದರು.

ವಿಧಾನಸಭೆಯ ಪ್ರತಿಪಕ್ಷದ ನಾಯಕ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಜೋಶಿ, ‘ಶೀಘ್ರದಲ್ಲೇ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ರಾಷ್ಟ್ರೀಯ ನಾಯಕರೊಬ್ಬರು ಬರಲಿದ್ದು, ಚರ್ಚಿಸಿ ವಿರೋಧ ಪಕ್ಷದ ನಾಯಕ ಯಾರಾಗಬೇಕು ಎಂಬುದನ್ನು ತೀರ್ಮಾನಿಸಲಿದ್ದಾರೆ’ ಎಂದರು.

ಇಡೀ ದೇಶವೇ ಪ್ರಧಾನಿ ಮೋದಿ ಅವರ ನಾಯಕತ್ವವನ್ನು ಒಪ್ಪಿದೆ. ಲೋಕಸಭಾ ಚುನಾವಣೆ ಬೇರೆ ವಿಚಾರಗಳ ಮೇಲೆ ನಡೆಯುತ್ತದೆ. ರಾಜ್ಯ ಚುನಾವಣೆ ವಿಚಾರ ಬೇರೆಯೇ ಇತ್ತು. ದೇಶದ ಹಲವು ಸಮೀಕ್ಷೆಗಳಲ್ಲಿ ಈಗ ಚುನಾವಣೆ ನಡೆದರೂ ಬಿಜೆಪಿ 300-330 ಸ್ಥಾನ ಗೆಲ್ಲಲಿದೆ ಎಂಬ ನಿರೀಕ್ಷೆಯಿದೆ. ಹೀಗಾಗಿ ವಿಧಾನಸಭಾ ಚುನಾವಣೆಗೂ ಲೋಕಸಭಾ ಚುನಾವಣೆಗೂ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದರು.

SCROLL FOR NEXT