ರಾಜ್ಯ

ಬಿಸಿಲಿನ ಬೇಗೆ ಒಂದೆಡೆ, ಅನಿಯಮಿತ ವಿದ್ಯುತ್ ಕಡಿತ ಮತ್ತೊಂದೆಡೆ: ನಗರದಲ್ಲಿ ಜನತೆ ಕಂಗಾಲು

Manjula VN

ಬೆಂಗಳೂರು: ಸುಡು ಬಿಸಿಲಿಗೆ ನಗರದ ಜನತೆ ತತ್ತರಿಸಿ ಹೋಗುತ್ತಿದ್ದು, ಈ ನಡುವಲ್ಲೇ ನಗರದ ಹಲವೆಡೆ ವಿದ್ಯುತ್ ಕಡಿತ ಮಾಡುತ್ತಿರುವುದು ಜನತೆ ಕಂಗಾಲಾಗುವಂತೆ ಮಾಡಿದೆ.

ಬೆಳಿಗ್ಗೆ 11 ಗಂಟೆಯ ನಂತರ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಕೆಲವೆಡೆ ಅರ್ಧಗಂಟೆ, ಇನ್ನು ಕೆಲವೆಡೆ ಒಂದು ಗಂಟೆಯ ವರೆಗೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ ಎಂದು ಮಾಗಡಿ ರಸ್ತೆ ನಿವಾಸಿ ಪುಷ್ಪಾ ಎಲ್ ಅವರು ಹೇಳಿದ್ದಾರೆ.

ನಗರದ ಪಶ್ಚಿಮ, ಉತ್ತರ ಮತ್ತು ಪೂರ್ವ ವಲಯಗಳಲ್ಲಿ ಬೆಳಗಿನ ಸಮಯದಲ್ಲಿ ವಿದ್ಯುತ್ ವ್ಯತ್ಯಯವಾಗುತ್ತಿರುವುದು ಕಂಡು ಬಂದಿದೆ.

ನೃಪತುಂಗ ನಗರ ಮತ್ತು ಆರ್‌ಎಂವಿ 2ನೇ ಹಂತದ ನಿವಾಸಿಗಳಿಂದಲೂ ವಿದ್ಯುತ್ ಕಡಿತವಾಗುತ್ತಿರುವ ಕುರಿತು ದೂರುಗಳು ಕೇಳಿ ಬರುತ್ತಿವೆ.

ಪ್ರತಿದಿನ ಬೆಳಗ್ಗೆ 5.30ರಿಂದ 6ರವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ. ನಾವೆಲ್ಲರೂ ಇನ್ವರ್ಟರ್‌ಗಳು ಮತ್ತು ಯುಪಿಎಸ್‌ಗಳ ಮೇಲೆ ಅವಲಂಬಿತರಾಗಿರುವುದರಿಂದ ನಮಗೆ ಇದು ತಿಳಿಯುತ್ತಿಲ್ಲ ಎಂದು ನೃಪತುಂಗ ನಗರದ ನಿವಾಸಿ ಪ್ರಭಾಕರ್ ಅವರು ಹೇಳಿದ್ದಾರೆ.

ಈಗಾಗಲೇ ಬೇಸಿಗೆಯ ತಾಪ ಹೆಚ್ಚಾಗಿದ್ದು, ಗಂಟೆಗಟ್ಟಲೆ ವಿದ್ಯುತ್ ಕಡಿತಗೊಳಿಸುತ್ತಿರುವುದು ಸಂಕಷ್ಟ ಎದುರು ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ (ಬೆಸ್ಕಾಂ) ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್)ದ ಅಧಿಕಾರಿಗಳು ತಾಂತ್ರಿಕ ದೋಷಗಳು ಮತ್ತು ನಿರ್ವಹಣೆ ಕಾರ್ಯಗಳಿಂದಾಗಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಮಂಗಳವಾರ ಪೂರ್ವ ಬೆಂಗಳೂರಿನ 400 ಪವರ್ ಕೇಂದ್ರಗಳಲ್ಲಿ ವಿದ್ಯುತ್ ಸಮಸ್ಯೆಗಳು ಕಂಡು ಬಂದಿದ್ದವು. ಇದು ಅನೇಕ ಪ್ರದೇಶಗಳಲ್ಲಿ ವಿದ್ಯುತ್ ಕಡಿತಕ್ಕೆ ಕಾರಣವಾಯಿತು. ವಿದ್ಯುತ್ ಕಡಿತದ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ. ತಾಂತ್ರಿಕ ದೋಷದಿಂದ ಕೆಲವೆಡೆ ಬೆಳಗ್ಗೆ ವಿದ್ಯುತ್ ಕಡಿತವಾಗಿದೆ. ಗರಿಷ್ಠ ಲೋಡ್ ಹೆಚ್ಚಾದಾಗ, ಟ್ರಾನ್ಸ್ಫಾರ್ಮರ್ ಟ್ರಿಪ್ ಆಗುತ್ತದೆ. ಸಮಸ್ಯೆಯನ್ನು ಕೂಡಲೇ ಪರಿಹರಿಸಲಾಗಿದೆ ಎಂದು ಕೆಪಿಟಿಸಿಎಲ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

SCROLL FOR NEXT