ರಾಜ್ಯ

ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಈಜುಕೊಳಕ್ಕೆ ತೆರಳಿದ ಬಾಲಕರು ನೀರಿನಲ್ಲಿ ಮುಳುಗಿ ಸಾವು, ಭದ್ರತಾ ವೈಫಲ್ಯದ ಆರೋಪ

Ramyashree GN

ದಾವಣಗೆರೆ: ನಗರದ ದೇವರಾಜ ಅರಸು ಬಡಾವಣೆಯ ಈಜುಕೊಳದಲ್ಲಿ ಮುಳುಗಿ ಇಬ್ಬರು ಬಾಲಕರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. 

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಈ ಈಜುಕೊಳವನ್ನು 5 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಳಿಸಲಾಗಿತ್ತು. ಇದರ ನಿರ್ವಹಣೆಯನ್ನು ಟೆಂಡರ್‌ದಾರರೊಬ್ಬರಿಗೆ ವಹಿಸಿದ್ದು, 2 ತಿಂಗಳಿನಿಂದ ಸಾರ್ವಜನಿಕರಿಗೆ ಈಜಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ದಿನ 150 ರಿಂದ 200 ಜನರು ಈ ಈಜುಕೊಳಕ್ಕೆ ಭೇಟಿ ನೀಡುತ್ತಿದ್ದಾರೆ.

ಮೃತರನ್ನು ಭಟ್ಟಿ ಲೇಔಟ್‌ನ ಮುಕ್ತಿಯಾರ್ ಅವರ ಪುತ್ರ ಮುಬಾರಕ್ (15) ಹಾಗೂ ನಿಸಾರ್ ಅಹಮದ್ ಅವರ ಪುತ್ರ ತಾಜುದ್ದೀನ್ (16) ಎಂದು ಗುರುತಿಸಲಾಗಿದೆ. 

ಮೃತರು ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಈಜುಕೊಳಕ್ಕೆ ಇಳಿದಿದ್ದರು. ಆದರೆ, ಈಜು ಬಾರದೆ ಮೃತಪಟ್ಟಿದ್ದರು. 

ಸದ್ಯಕ್ಕೆ ಮೃತ ದೇಹಗಳನ್ನು ಜಿಲ್ಲಾ ಚಿಗಟೇರಿ ಸರ್ಕಾರಿ ಆಸ್ಪತ್ರೆಯಗೆ ರವಾನಿಸಲಾಗಿದ್ದು, ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ‌ ನಡೆಸಿ ತನಿಖೆ ಮುಂದುವರೆಸಿದ್ದಾರೆ.

ಭದ್ರತಾ ವೈಫಲ್ಯವೇ ಬಾಕಲರ ಸಾವಿಗೆ ಕಾರಣ ಎಂಬ ಆರೋಪ ಕೇಳಿಬಂದಿದ್ದು, ಮೃತರ ಜೊತೆಗೆ ಈಜುಕೊಳಕ್ಕೆ ತೆರಳಿದ್ದ ಸೂಫಿಯಾನ್ ಎಂಬಾತ ಬಾಲಕರು ನೀರಿನಲ್ಲಿ ಮುಳುಗಿರುವ ವಿಚಾರವನ್ನು ಈಜುಕೊಳ ನಿರ್ವಹಣೆ ಮಾಡುತ್ತಿದ್ದ ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ. ಆದರೆ, ಅವರು ನಿರ್ಲಕ್ಷ್ಯ ವಹಿಸಿದರು ಎಂದು ಮುಬಾರಕ್ ತಂದೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಈಜುಕೊಳದ ನಿರ್ವಾಹಕರು ಯಾವುದೇ ಮುನ್ನೆಚ್ಚರಿಕೆ ವ್ಯವಸ್ಥೆಯನ್ನು ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದು, ನನ್ನ ಮಗ ಹಾಗೂ ಆತನ ಸ್ನೇಹಿತನ ಸಾವಿಗೆ ಹೊಣೆಗಾರರಾಗಿದ್ದಾರೆ. ಹೀಗಾಗಿ, ನಿರ್ವಾಹಕರು ಮತ್ತು ಸಿಬ್ಬಂದಿ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮುಬಾರಕ್ ತಂದೆ ಮುಕ್ತಿಯಾರ್ ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

SCROLL FOR NEXT