ರಾಜ್ಯ

ಮೈಸೂರು: 18 ಕೋಟಿ ರೂ. ಮೌಲ್ಯದ ಅಂಬರ್ ಗ್ರೀಸ್ ವಶ: ಮೂವರ ಬಂಧನ

Manjula VN

ಮೈಸೂರು: 18 ಕೋಟಿ ರೂ. ಮೌಲ್ಯದ  ಅಂಬರ್ ಗ್ರೀಸ್ (ತಿಮಿಂಗಿಲ ವಾಂತಿ) ಮಾರಾಟ ಮಾಡಲು ಯತ್ನಿಸಿದ ಮೂವರನ್ನು ಎಚ್.ಡಿ‌.ಕೋಟೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಕೇರಳದ ಇಬ್ಬರು ನಾವಿಕರು ಹಾಗೂ ಎಚ್.ಡಿ‌.ಕೋಟೆಯ ಓರ್ವ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮೂವರು ಆರೋಪಿಗಳು ಕೇರಳದ ಸ್ಥಳೀಯ ಮೀನುಗಾರರಿಂದ ಆಂಬರ್ಗ್ರಿಸ್ ಅನ್ನು ಪಡೆದುಕೊಂಡಿದ್ದರು. ಬಳಿಕ ಅದನ್ನು ರಾಜ್ಯ ಗಡಿ ದಾಟಿ ಸಾಗಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದರು.

ಆರೋಪಿಗಳಿಂದ ವಶಪಡಿಸಿಕೊಂಡಿರುವ ವಸ್ತು ಅಂಬರ್ ಗ್ರೀಸ್ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದು, ಅದರ ಮೌಲ್ಯ ಸುಮಾರು 18 ಕೋಟಿ ರೂ. ಎಂದು ಅಂದಾಜಿಸಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಪ್ರತಿ ಕೆಜಿಗೆ 1.5 ಕೋಟಿಯಿಂದ 1.8 ಕೋಟಿ ರೂ.ವರೆಗೆ ಮೌಲ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದೀಗ ಮೂವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಚ್‌ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದೆ.

ಸಿಇಎನ್‌ ಪೊಲೀಸ್‌ ಇನ್‌ಸ್ಪೆಕ್ಟರ್‌ ಪುರುಷೋತ್ತಮ ನೀಡಿದ ಮಾಹಿತಿ ಮೇರೆಗೆ ಎಚ್‌ಡಿ ಕೋಟೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಶಬೀರ್‌ ಅಹಮದ್‌ ಮತ್ತು ಅವರ ತಂಡವು ಎಚ್‌ಡಿ ಕೋಟೆ ಹ್ಯಾಂಡ್‌ಪೋಸ್ಟ್‌ನಲ್ಲಿರುವ ಹೊಟೇಲ್‌ ಬಳಿ ಕಾರಿನಲ್ಲಿ ಕುಳಿತಿದ್ದ ಮೂವರನ್ನು ಬಂಧಿಸಿ ಅವರಿಂದ ಅಂಬರ್‌ಗ್ರಿಸ್ ವಶಪಡಿಸಿಕೊಂಡಿದ್ದಾರೆ ಎಂದು ಎಸ್‌ಪಿ ಸೀಮಾ ಲಟ್ಕರ್ ಮಾಹಿತಿ ನೀಡಿದ್ದಾರೆ.

ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.

ವಸ್ತುವನ್ನು ವಶಪಡಿಸಿಕೊಂಡ ನಂತರ, ಹೆಚ್ಚಿನ ತನಿಖೆಗಾಗಿ ಅದರ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ಪ್ರಾಣಿಗಳ ಉತ್ಪನ್ನವನ್ನು ಸಾಂಪ್ರದಾಯಿಕ ಔಷಧಿಗಳಿಗೆ ಮತ್ತು ಸುಗಂಧ ದ್ರವ್ಯಗಳ ತಯಾರಿಕೆಗೆ ಬಳಸುವುದರಿಂದ ಅಂಬರ್ಗ್ರಿಸ್ಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಅದನ್ನು ಕಾನೂನುಬಾಹಿರವಾಗಿ ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ, ವಿಶೇಷವಾಗಿ ಅರಬ್ ರಾಷ್ಟ್ರಗಳಿಗೆ ಇದನ್ನು ಹೆಚ್ಚು ರಫ್ತು ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

SCROLL FOR NEXT