ರಾಜ್ಯ

ರಾಜ್ಯದಾದ್ಯಂತ ಭಾರಿ ಮಳೆ: ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಬೆಳೆ ಹಾನಿ, ರೈತರು ಕಂಗಾಲು

Ramyashree GN

ಬೆಂಗಳೂರು: ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಕಳೆದೆರಡು ದಿನಗಳಿಂದ ಬೀಸಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಭತ್ತ, ಬಾಳೆ, ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆ ಹಾನಿಯಾಗಿದೆ. ದಾವಣಗೆರೆ ತಾಲೂಕಿನಲ್ಲಿ ಗಾಳಿಗೆ 150 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಭತ್ತ ಹಾನಿಯಾಗಿದ್ದು, ಮನೆ ಕೂಡ ಕುಸಿದಿದೆ. ಹಿರೇತೊಗಲೇರಿ ಗ್ರಾಮದಲ್ಲಿ ಆಲಿಕಲ್ಲು ಮಳೆಗೆ 250 ಎಕರೆಗೂ ಹೆಚ್ಚು ಭತ್ತ ಹಾನಿಯಾಗಿದೆ.

ಹರಿಹರ ತಾಲೂಕಿನಲ್ಲಿ 2 ಗುಡಿಸಲಿಗೆ ಹಾನಿಯಾಗಿದ್ದು, 295 ಎಕರೆ ಭತ್ತ ನಾಶವಾಗಿದೆ. ಜಗಳೂರು ತಾಲೂಕಿನಲ್ಲಿ ಒಂದು ಮನೆ ಕುಸಿದಿದ್ದು, 10 ಗುಡಿಸಲುಗಳು, 30 ಎಕರೆಯಲ್ಲಿ ಬೆಳೆದ ಅಡಕೆ, 38 ಎಕರೆಯಲ್ಲಿ ಬಾಳೆ, 20 ಎಕರೆಯಲ್ಲಿ ಪಪ್ಪಾಯ ಹಾನಿಯಾಗಿದೆ. ಸಿಡಿಲು ಬಡಿದು ಹೋರಿ ಮೃತಪಟ್ಟಿದೆ.

ದಾವಣಗೆರೆ ಜಿಲ್ಲೆಯಲ್ಲಿ 13.6 ಮಿ.ಮೀ ಸರಾಸರಿ ಮಳೆಯಾಗಿದ್ದು, ಒಟ್ಟು 79.40 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ದಾವಣಗೆರೆ ಜಿಲ್ಲಾಧಿಕಾರಿ ಶಿವಾನಂದ ಕಾಪ್ಶಿ, ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಮತ್ತಿತರ ಅಧಿಕಾರಿಗಳು ಜಿಲ್ಲೆಯ ಚಿಕ್ಕತೊಗಲೇರಿ ಮತ್ತು ಹಿರೇತೊಗಲೇರಿ ಗ್ರಾಮಗಳಿಗೆ ಭೇಟಿ ನೀಡಿ ಹಾನಿಯ ಅಂದಾಜು ಮಾಡಿದ್ದಾರೆ.

ಈಮಧ್ಯೆ, ಬೆಳಗಾವಿ ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಂದ ಆರಂಭವಾದ ಭಾರಿ ಮಳೆ ಮಂಗಳವಾರ ಮುಂಜಾನೆವರೆಗೂ ಮುಂದುವರಿದಿದ್ದು, ಜನಜೀವನವನ್ನು ಅಸ್ಥವ್ಯಸ್ಥಗೊಳಿಸಿದೆ. ಹಲವಾರು ಮರಗಳು ನೆಲಕ್ಕುರುಳಿದ್ದು, ವಿದ್ಯುತ್ ತಂತಿಗಳಿಗೆ ಹಾನಿಯಾಗಿದೆ ಮತ್ತು ನಗರದ ವಿವಿಧ ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.

SCROLL FOR NEXT