ರಾಜ್ಯ

ಸಂಚಾರ ದಟ್ಟಣೆಯಿಂದಾಗಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಯೋಜಿತ ರೀತಿ ಕಾರ್ಯನಿರ್ವಹಿಸುತ್ತಿಲ್ಲ: ಪ್ರತಾಪ್ ಸಿಂಹ

Manjula VN

ಮೈಸೂರು: ಸಂಚಾರ ದಟ್ಟಣೆಯಿಂದಾಗಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಯೋಜಿತ ರೀತಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಗುರುವಾರ ಹೇಳಿದ್ದಾರೆ.

ನಗರದ ಮಣಿಪಾಲ್ ಆಸ್ಪತ್ರೆ ಸಿಗ್ನಲ್ ಬಳಿ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಕಾಮಗಾರಿ ಪರಿಶೀಲಿಸಿದ ಬಳಿಕ ಪ್ರತಾಪ್ ಸಿಂಹ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮೈಸೂರು ಪ್ರವೇಶ ದ್ವಾರದಲ್ಲಿ ಸಂಚಾರ ದಟ್ಟಣೆ ಕಂಡು ಬರುತ್ತಿದ್ದು, ಇದರಿಂದಾಗಿ ದಶಪಥಗಳ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಯೋಜಿತ ರೀತಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿದ್ದಾರೆ.

ಮೇಲ್ಸೇತವೆ ನಿರ್ಮಾಣ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಮಾಹಿತಿಗಳೂ ಬಂದಿಲ್ಲ. ಯೋಜನೆಗೆ ತಾಂತ್ರಿಕ ದೋಷಗಳು ಕಂಡು ಬಂದಿದೆ. ಯೋಜನೆಗೆ ಅನುಮತಿ ನೀಡಲು ಕೇಂದ್ರ ಚಿಂತನೆ ನಡೆಸುತ್ತಿದ್ದು, ಎನ್‌ಎಚ್‌ಎಐ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ಬಿಜೆಪಿ ಕಾರ್ಯಕರ್ತರು ಅಪಾಯದಲ್ಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದಮೇಲೆ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗಿದೆ, ನಮ್ಮ ಕಾರ್ಯಕರ್ತರನ್ನು ಗುರಿ ಮಾಡುತ್ತಿದ್ದಾರೆ, ಇದರಿಂದ ಬಿಜೆಪಿ ಕಾರ್ಯಕರ್ತರು ಅಪಾಯದಲ್ಲಿದ್ದಾರೆ. ಬಿಜೆಪಿ ಕಾರ್ಯಕರ್ತರನ್ನ ಅಪಾಯಕ್ಕೆ ಸಿಲುಕಿಸಿದ್ದಕ್ಕಾಗಿ ನಾವು ಕ್ಷಮೆ ಕೇಳುತ್ತೇವೆ. ಮುಂದಿನ ದಿನಗಳಲ್ಲಿ ಉತ್ತಮ ರಾಜಕಾರಣ ಮಾಡೋಣ ಎಂದು ತಿಳಿಸಿದರು.

ಬಿಜೆಪಿ ಕೇಂದ್ರ ಸರ್ಕಾರದಲ್ಲಿ ಉತ್ತಮ ಕೆಲಸಗಳನ್ನ ಮಾಡಿದೆ. ರಾಜ್ಯದಲ್ಲಿಯೂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಉತ್ತಮ ಸೇವೆ ಮಾಡಿತ್ತು. ಆದರೆ, ನಾವು ಅವುಗಳನ್ನ ಜನರಿಗೆ ತಿಳಿಸುವಲ್ಲಿ ವಿಫಲರಾಗಿದ್ದೇವೆ. ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ನೋಡಿದ ಕೂಡಲೇ ಜನರು ಗ್ಯಾರಂಟಿ ಕೊಟ್ಟೇ ಬಿಟ್ಟರು ಎಂದು ಮತ ಹಾಕಿದ್ದಾರೆ. ನಾನು ಗ್ಯಾರಂಟಿಗಳ ಪರ ಇದ್ದೇನೆ. ಆದರೆ, ಅರ್ಥವ್ಯವಸ್ಥೆಗೆ ಹೊಡೆತ ಬೀಳದಂತೆ ನೋಡಿಕೊಳ್ಳಬೇಕು ಅಷ್ಟೇ ಎಂದು ಮನವಿ ಮಾಡಿದರು.

ಈ ಬಾರಿ ಕಾಂಗ್ರೆಸ್‌ ಗೆದ್ದಿದೆ ಅಂದ ಮಾತ್ರಕ್ಕೆ ಎಲ್ಲವೂ ಮುಗಿದು ಹೋಯಿತು, ಇದೇ ಶಾಶ್ವತ ಎಂದಲ್ಲ. ಪ್ರತೀ ಚುನಾವಣೆಯಲ್ಲೂ ಫಲಿತಾಂಶ ಬದಲಾಗುತ್ತೆ. ಮೀಸಲಾತಿ ನೀಡಿ ಒಳ್ಳೆ ಕೆಲಸ ಮಾಡಿದ್ದರೂ ನಾವು ಮನವರಿಕೆ ಮಾಡಿಕೊಡುವಲ್ಲಿ ವಿಫಲರಾದೆವು. ನಾವು ಉಚಿತ ಬಸ್‌ ಪಾಸ್‌ ಸೇವೆ ಮಾಡಿದೆವು. ಪ್ರಧಾನಮಂತ್ರಿ ಅನ್ನ ಕಲ್ಯಾಣ ಯೋಜನೆ ಮಾಡಿದೆವು. ಅವುಗಳನ್ನ ಜಾರಿ ಮಾಡಿದ್ದರೆ ಇವತ್ತು ಈ ಪರಿಸ್ಥಿತಿ ಬರುತ್ತಿರಲಿಲ್ಲ. ಇದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ.

ರಾಜ್ಯದ ಜನತೆ ಕಾಂಗ್ರೆಸ್ ಪಕ್ಷವನ್ನು ನೋಡಿ ಅಲ್ಲ, ಗ್ಯಾರಂಟಿಗಳನ್ನು ನೋಡಿ ಮತ ಹಾಕಿದ್ದಾರೆ. ಹೀಗಾಗಿ ವಿಧಾನಸಭಾ ಚುನಾವಣೆ ಫಲಿತಾಂಶ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ. ಗ್ಯಾರಂಟಿಗಳ ಘೋಷಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ಭರವಸೆಗಳನ್ನು ಯಾವುದೇ ನಿಯಮಗಳನ್ನು ಹೇರದೆ ಸಂಪೂರ್ಣವಾಗಿ ಜಾರಿಗೊಳಿಸಬೇಕು. ಇಲ್ಲದೇ ಹೋದಲ್ಲಿ ಹೋರಾಟ ಆರಂಭಿಸುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ.

SCROLL FOR NEXT