ರಾಜ್ಯ

ಪಠ್ಯಪುಸ್ತಕ ಪರಿಷ್ಕರಣೆ ಖಚಿತ, ಸಿಎಂ ನಿರ್ದೇಶನದಂತೆ ತಂಡ ರಚನೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ

Manjula VN

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ಮಾಡಲು ಸರ್ಕಾರ ಸಿದ್ದವಿದ್ದು, ಮಕ್ಕಳ ಭವಿಷ್ಯ, ಮಕ್ಕಳ ಚಿಂತನೆ, ಮಕ್ಕಳ ಅವಶ್ಯಕತೆ ಇರುವ ವಿದ್ಯಾಭ್ಯಾಸ ಬಿಟ್ಟು ಬೇರೆ ಏನಾದರೂ ಪಠ್ಯದಲ್ಲಿ ಇದ್ದರೆ ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪರಿಷ್ಕರಣೆ ಮಾಡುವ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಂಗಳವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪ್ರಣಾಳಿಕೆಯ ಉಪಾಧ್ಯಕ್ಷನಾಗಿದ್ದೆ. ಪ್ರಣಾಳಿಕೆಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಬಹಳ ಸ್ಪಷ್ಟವಾಗಿ ಹೇಳಿದ್ದೇವೆ, ಅದರಂತೆ ಮಕ್ಕಳ ಚಿಂತನೆ ಕಲ್ಮಶವಾಗಬಾರದು. ವಿದ್ಯಾಭ್ಯಾಸದಲ್ಲಿ ಅಡಚಣೆ ಆಗಬಾರದು. ಹಾಗಾಗಿ ಇದರಲ್ಲಿರುವ ತಪ್ಪುಗಳನ್ನು ಸರ್ಕಾರದ ಕಡೆಯಿಂದ, ನನ್ನ ಕಡೆಯಿಂದ ತೆರವು ಮಾಡುವ ಕೆಲಸ ಮಾಡುತ್ತೇವೆಕಂದು ಹೇಳಿದರು.

ಈಗಾಗಲೇ ಮುಖ್ಯಮಂತ್ರಿಗಳ ನಿರ್ದೇಶನದಂತೆ ತಂಡವೊಂದನ್ನು ರಚನೆ ಮಾಡಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ತಂಡ ರಚನೆಯಾಗಲಿದೆ ಜೂನ್.1 ಸಚಿವ ಸಂಪುಟ ಸಭೆ ನಡೆಯಲಿದೆ. ಸಭೆ ಬಳಿಕ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಪಠ್ಯಪುಸ್ತಕದಲ್ಲಿನ ಎಲ್ಲವನ್ನು ಕೂಡ ಪರಿಶೀಲನೆ ಮಾಡಿ, ಮಕ್ಕಳ ಭವಿಷ್ಯಕ್ಕೆ, ಮಕ್ಕಳ ಚಿಂತನೆಗೆ, ಅವಶ್ಯಕತೆ ಇರುವ ವಿದ್ಯಾಭ್ಯಾಸ ಬಿಟ್ಟು ಬೇರೆ ಏನಾದರೂ ಇದ್ದರೆ ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಬದಲಾವಣೆ ಮಾಡುವ ಕೆಲಸ ಮಾಡಲಾಗುತ್ತದೆ.

ಹಿಜಾಬ್ ವಿಚಾರ ಕುರಿತು ಮಾತನಾಡಿ, ಈ ಸಂಬಂಧ ಕಾನೂನುಬದ್ಧ ಹೋರಾಟ ಮುಂದುವರೆಯಲಿದೆ. ವಿಚಾರ ನ್ಯಾಯಾಲಯದ ಅಂಗಳದಲ್ಲಿರುವುದರಿಂದ ಈ ಬಗ್ಗೆ ಹೆಚ್ಚು ಏನನ್ನೂ ಹೇಳುವುದಿಲ್ಲ. ಏನೇ ಹೋರಾಟ ಮಾಡಿದರೂ ಕಾನೂನು ಬದ್ಧವಾಗಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಇಲಾಖೆ ಅಧ್ಯಯನ ಮಾಡಲು 2-3 ತಿಂಗಳು ಕಾಲಾವಕಾಶ ಬೇಕಾಗಿದೆ. ಮಕ್ಕಳ ಭವಿಷ್ಯದ ವಿಚಾರವಾಗಿರುವುದರಿಂದ ಬಹಳ ಜವಾಬ್ದಾರಿಯುತವಾಗಿ ನಿರ್ಧಾರಗಳ ಕೈಗೊಳ್ಳಬೇಕಾಗಿದೆ. ಹಾಗಾಗಿ ಏನೇ ನಿರ್ಧಾರ ಮಾಡಿದರೂ ಅಧ್ಯಯನ ಮಾಡಿ ಯೋಚಿಸಿ, ಚರ್ಚಿಸಿಯೇ ನಿರ್ಧಾರ ಮಾಡುತ್ತೇವೆ. ಆತುರದ ನಿರ್ಧಾರಕ್ಕೆ ಮುಂದಾಗಲ್ಲ ಎಂದು ಸ್ಪಷ್ಟಪಡಿಸಿದರು.

ಶಾಲೆಗಳ ಆರಂಭಕ್ಕೆ ಎಲ್ಲಾ ರೀತಿಯ ಸಿದ್ಥತೆಗಳು ಪೂರ್ಣಗೊಂಡಿದೆ. ಮಕ್ಕಳನ್ನು ಸ್ವಾಗತ ಮಾಡಲು ನಮ್ಮ ಆಡಳಿತ ವರ್ಗ ಮತ್ತು ನಾವು, ಶಾಲಾ ಶಿಕ್ಷಕರು, ಎಲ್ಲರೂ ಸಿದ್ಧರಿದ್ದೇವೆ. ಶಾಲೆಗೆ ಹೋಗುತ್ತಿರುವ ಎಲ್ಲಾ ಮಕ್ಕಳಿಗೆಲ್ಲ ಶುಭ ಕೋರುತ್ತೇನೆ. ಬಹಳ ಸಂತೋಷದಿಂದ ಶಾಲೆಗಳಿಗೆ ಹೋಗಿ ಪಾಠಗಳನ್ನು ಕೇಳುವಂತೆ ಮನವಿ ಮಾಡುತ್ತೇನೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ.

ಈಗಾಗಲೇ ಅಧಿಕಾರಿ ವರ್ಗದವರ ಜೊತೆ ಸಭೆ ನಡೆಸಿದ್ದೇನೆ. ಎಲ್ಲವೂ ಸರಿ ಇದೆ. ಕೆಲವು ತ್ವರಿತ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ. ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ಇಂದು ಅಥವಾ ನಾಳೆ ಎರಡು ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

SCROLL FOR NEXT