ಬೆಂಗಳೂರು: ಜೆಎಸ್ಡಬ್ಲ್ಯು ಎನರ್ಜಿಯಿಂದ ಖರೀದಿಸುವ ಪ್ರತಿ ಯೂನಿಟ್ (ಕೆಡಬ್ಲ್ಯುಎಚ್) ವಿದ್ಯುತ್ಗೆ 7.25 ರೂಪಾಯಿ ಪಾವತಿಸುವಂತೆ ಕರ್ನಾಟಕ ಹೈಕೋರ್ಟ್ ಸೋಮವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಏಕ ನ್ಯಾಯಾಧೀಶರ ಮುಂದೆ ರಾಜ್ಯ ಸರ್ಕಾರ ನಿಗದಿಪಡಿಸಿದ ದರವನ್ನು ಪ್ರಶ್ನಿಸಿ ಜಿಎಸ್ ಡಬ್ಲ್ಯೂ ಸಲ್ಲಿಸಿದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಈ ಮಧ್ಯಂತರ ಆದೇಶ ಹೊರಬಂದಿದೆ.
ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಮ್) ಪ್ರತಿ ಯೂನಿಟ್ ಗೆ 4.86 ರೂ. ಪಾವತಿಸುವಂತೆ ಕಳೆದ ತಿಂಗಳ 16 ಮತ್ತು 17 ರಂದು ಕ್ರಮವಾಗಿ ರಾಜ್ಯ ಸರ್ಕಾರ ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಹೊರಡಿಸಿದ ಆದೇಶಗಳನ್ನು ಪ್ರಶ್ನಿಸಿ ಜೆಎಸ್ಡಬ್ಲ್ಯು ಎನರ್ಜಿ ಸಲ್ಲಿಸಿದ ಮೇಲ್ಮನವಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರ ವಿಭಾಗೀಯ ಪೀಠವು ಈ ಆದೇಶ ನೀಡಿದೆ.
ಒಂದು ವಾರದೊಳಗೆ ಏಕಸದಸ್ಯ ನ್ಯಾಯಾಧೀಶರ ಮುಂದೆ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ವಿಭಾಗೀಯ ಪೀಠ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಅಲ್ಲದೇ, ಪ್ರತಿಕ್ರಿಯೆ ಸಲ್ಲಿಸಿದ ನಂತರ ಒಂದು ವಾರದೊಳಗೆ ಅರ್ಜಿಯ ಬಗ್ಗೆ ತೀರ್ಮಾನಿಸುವಂತೆ ಏಕ ನ್ಯಾಯಾಧೀಶರಿಗೆ ಮನವಿ ಮಾಡಿತು.