ಮಂಗಳೂರು: ನಗರದಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ 32 ವರ್ಷದ ಡ್ರಗ್ಸ್ ಪೆಡ್ಲರ್ ನನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಮೂಲಗಳು ಸೋಮವಾರ ತಿಳಿಸಿವೆ.
ಬಂಧಿತ ವ್ಯಕ್ತಿಯನ್ನು ಹರೇಕಳ ಮೂಲದ ಬಜಾಲ್ ನಿವಾಸಿ ಹಸೈನಾರ್ ಅಲಿಯಾಸ್ ಅಚ್ಚು ಎಂದು ಗುರುತಿಸಲಾಗಿದೆ.
ಪಡೀಲ್ ನಲ್ಲಿ ಮಾದಕ ವಸ್ತು ಮಾರಾಟ ಮಾಡಲಾಗುತ್ತಿದ್ದ ಅಚ್ಚುನನ್ನು ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಆತನಿಂದ 60,000 ರೂಪಾಯಿ ಮೌಲ್ಯದ 12 ಗ್ರಾಂ ತೂಕದ ಎಂಡಿಎಂಎ, ಒಂದು ಮೊಬೈಲ್ ಫೋನ್ ಮತ್ತು ತೂಕ ಮಾಡುವ ಡಿಜಿಟಲ್ ಯಂತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತ ಆರೋಪಿಯು ಇನ್ನೂ ಮೂರು ಕೊಲೆ ಯತ್ನ ಮತ್ತು ಹಲ್ಲೆ ಪ್ರಕರಣಗಳನ್ನು ಎದುರಿಸುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.