ರಾಜ್ಯ

ನೇಮಕಾತಿ ಪ್ರಕ್ರಿಯೆಯಲ್ಲಿ ಲೋಪ: ಕೆಎಂಎಫ್‌ಗೆ ಕರ್ನಾಟಕ ಹೈಕೋರ್ಟ್ ತರಾಟೆ

Ramyashree GN

ಬೆಂಗಳೂರು: ಉದ್ಯೋಗ ಅರ್ಜಿಯೊಂದಿಗೆ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ ಸಾಮಾಜಿಕ ಸ್ಥಾನಮಾನದ ಪ್ರಮಾಣಪತ್ರವು ಅಸ್ಪಷ್ಟವಾಗಿದೆ ಎಂಬ ಕಾರಣಕ್ಕಾಗಿ ಮೀಸಲಾತಿ ವರ್ಗದ ಅಭ್ಯರ್ಥಿಯನ್ನು ಸಾಮಾನ್ಯ ವರ್ಗಕ್ಕೆ ಸೇರಿಸಿದ್ದಕ್ಕಾಗಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟವನ್ನು (ಕೆಎಂಎಫ್) ಕರ್ನಾಟಕ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಸ್ವಾಭಾವಿಕ ನ್ಯಾಯದ ತತ್ವದ ಅಡಯಲ್ಲಿ ಕೆಎಂಎಫ್ ಅಭ್ಯರ್ಥಿಯನ್ನು ಹೆಚ್ಚು ಸ್ಪಷ್ಟವಾದ ಪ್ರಮಾಣಪತ್ರವನ್ನು ಸಲ್ಲಿಸಲು ಕೇಳಬೇಕಾಗಿತ್ತು ಎಂದು ಅದು ಹೇಳಿದೆ.

ಈ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರ ವಿಭಾಗೀಯ ಪೀಠವು, ಕೆಎಂಎಫ್ ನಡೆಯನ್ನು ಅರ್ಥಮಾಡಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ. ಒಕ್ಕೂಟವು ಮೇಲ್ಮನವಿದಾರರಿಗೆ ಸ್ಪಷ್ಟವಾದ ಪ್ರಮಾಣಪತ್ರವನ್ನು ಸಲ್ಲಿಸುವಂತೆ ಕೇಳಿದ್ದರೆ ಏನಾಗುತ್ತಿತ್ತು ಎಂದು ತರಾಟೆಗೆ ತೆಗೆದುಕೊಂಡಿದೆ.

ದೇವರಾಜ್ ಪಿಆರ್ ಎಂಬುವವರು ಅಪ್‌ಲೋಡ್ ಮಾಡಿದ ಪ್ರಮಾಣಪತ್ರವು ಸ್ಪಷ್ಟವಾಗಿಲ್ಲ ಎಂಬ ಕಾರಣಕ್ಕಾಗಿ ಕೆಎಂಎಫ್ ಅದನ್ನು ತಿರಸ್ಕರಿಸಿತ್ತು ಮತ್ತು ಅವರು ಮೀಸಲಾತಿ ವರ್ಗದ ಅಡಿಯಲ್ಲಿ ಕೆಲಸ ಹುಡುಕುತ್ತಿದ್ದಾಗ ಅವರನ್ನು ಸಾಮಾನ್ಯ ವರ್ಗಕ್ಕೆ ಸೇರಿಸಿತ್ತು.
ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಫೆಬ್ರುವರಿ 14, 2023ರಂದು ಹೈಕೋರ್ಟ್ ಏಕಸದಸ್ಯ ಪೀಠ ಅರ್ಜಿಯನ್ನು ತಿರಸ್ಕರಿಸಿತ್ತು. ಬಳಿಕ ಅವರು ಸಲ್ಲಿಸಿದ ಮೇಲ್ಮನವಿಯನ್ನು ವಿಭಾಗೀಯ ಪೀಠವು ಅನುಮತಿಸಿತು.

ಸಂವಿಧಾನದ 12ನೇ ವಿಧಿಯ ಪ್ರಕಾರ ಕೆಎಂಎಫ್ ರಾಜ್ಯ ಘಟಕವಾಗಿದ್ದು, ಅದರ ವ್ಯವಹಾರಗಳು ನ್ಯಾಯಯುತವಾಗಿರಬೇಕು. ನಮ್ಮದು ಸಾಂವಿಧಾನಿಕವಾಗಿ ನಿಗದಿಪಡಿಸಿದಂತೆ ಕಲ್ಯಾಣ ರಾಜ್ಯವಾಗಿದೆ ಎಂದು ಪೀಠ ಹೇಳಿದೆ.

ಮೇಲ್ಮನವಿದಾರರು ಅಪ್‌ಲೋಡ್ ಮಾಡಿದ ಸಾಮಾಜಿಕ ಸ್ಥಾನಮಾನದ ಪ್ರಮಾಣಪತ್ರವು ಸ್ಪಷ್ಟವಾಗಿ ಗೋಚರಿಸದ ಕಾರಣ ಅಥವಾ ಅಸ್ಪಷ್ಟವಾಗಿರುವ ಕಾರಣಕ್ಕಾಗಿ ಸಾಮಾನ್ಯ ವರ್ಗಕ್ಕೆ ಸೇರಿಸುವ ಒಕ್ಕೂಟದ ಕ್ರಮವು ಸಂಪೂರ್ಣವಾಗಿ ಅನ್ಯಾಯವಾಗಿದೆ. ಸ್ವಾಭಾವಿಕ ನ್ಯಾಯದ ತತ್ವದ ಅಡಿಯಲ್ಲಿ ಸ್ಪಷ್ಟವಾದ ಪ್ರಮಾಣಪತ್ರವನ್ನು ಅಪ್‌ಲೋಡ್ ಮಾಡಲು ಅಭ್ಯರ್ಥಿಗೆ ತಿಳಿಸುವ ಅಗತ್ಯವಿದೆ ಎಂದು ಪೀಠ ಹೇಳಿದೆ.

ಮೇಲ್ಮನವಿಯನ್ನು ಪರಿಗಣಿಸಿದ ಕೋರ್ಟ್, ಎರಡು ವಾರಗಳಲ್ಲಿ ಮೂಲ ಜಾತಿ ಪ್ರಮಾಣಪತ್ರದೊಂದಿಗೆ ದೇವರಾಜ್ ಅವರ ಅರ್ಜಿಯನ್ನು ಪರಿಗಣಿಸಲು ಕೆಎಂಎಫ್‌ಗೆ ಎರಡು ವಾರಗಳ ಕಾಲಾವಕಾಶವನ್ನು ನೀಡಿತು. 

SCROLL FOR NEXT