ರಾಜ್ಯ

ಒಕ್ಕಲಿಗರ ವಿರೋಧದ ನಡುವೆಯೂ ಜಾತಿ ಗಣತಿ ವರದಿ ಸ್ವೀಕರಿಸಲಾಗುವುದು ಎಂದ ಸಿಎಂ ಸಿದ್ದರಾಮಯ್ಯ

Manjula VN

ಬೆಂಗಳೂರು: ಜಾತಿಗಣತಿ ವರದಿಯನ್ನು ತಿರಸ್ಕರಿಸುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಒಕ್ಕಲಿಗ ಸಮುದಾಯದ ಪ್ರಮುಖರು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದು, ವಿರೋಧದ ನಡುವಲ್ಲೂ ಸರ್ಕಾರ ವರದಿಯನ್ನು ಸ್ವೀಕರಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಪುನರುಚ್ಚರಿಸಿದ್ದಾರೆ.

ವಿಧಾನಸೌಧದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ವರದಿ ತಿರಸ್ಕರಿಸುವಂತೆ ಸಮುದಾಯದ ಮುಖಂಡರು ಮನವಿ ಪತ್ರ ಸಲ್ಲಿಸಿದ್ದಾರೆ. ಆದರೆ, ವರದಿ ನೋಡುವುದಕ್ಕೂ ಮುನ್ನವೇ ವಿರೋಧಿಸುತ್ತಿರುವುದೇಕೆ ಎಂಬುದು ನನ್ನ ಪ್ರಶ್ನೆ ಎಂದು ಹೇಳಿದರು.

ಜಾತಿ ಗಣತಿ ವರದಿ ಕುರಿತು ಡಿಸಿಎಂ ಡಿಕೆ.ಶಿವಕುಮಾರ್ ಅವರು ನನ್ನೊಂದಿಗೆ ಎಂದಿಗೂ ಮಾತನಾಡಿಲ್ಲ, ಸಮುದಾಯದ ಮುಖಂಡರು ಮಾತ್ರ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದಾರೆ. ಸಮೀಕ್ಷೆಗಾಗಿ 162 ಕೋಟಿ ರೂಪಾಯಿ ಖರ್ಚು ಮಾಡಲಾಗಿದ್ದು, ನಾವು ವರದಿಯನ್ನು ಸ್ವೀಕರಿಸಬೇಕು, ಅವರಿಗೆ (ಒಕ್ಕಲಿಗರಿಗೆ) ಇರುವ ಅನುಮಾನಗಳು ವರದಿಯಲ್ಲಿವೆಯೇ ಇಲ್ಲವೇ ಎಂಬುದನ್ನು ನೋಡಬೇಕು. ನಾನೇ ವರದಿಯನ್ನು ನೋಡಿಲ್ಲ. ನಾನೇ ನೋಡದಿದ್ದರೆ ಬೇರೆಯವರು ಅದನ್ನು ಹೇಗೆ ನೋಡುತ್ತಾರೆ ಎಂದು ಪ್ರಶ್ನಿಸಿದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ವರದಿ ಸಲ್ಲಿಸುವವರೆಗೆ ಒಬಿಸಿ ಆಯೋಗದ ಅವಧಿಯನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದರು.

ಡಿಸೆಂಬರ್‌ನಲ್ಲಿ ವರದಿ ನೀಡುವುದಾಗಿ ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ. ಅವರ ಅಧಿಕಾರಾವಧಿ ಈ ತಿಂಗಳಿಗೆ ಮುಗಿಯುತ್ತಿರುವುದರಿಂದ ಅವರು ವರದಿ ಸಲ್ಲಿಸುವವರೆಗೆ ಅವರ ಅಧಿಕಾರಾವಧಿಯನ್ನು ವಿಸ್ತರಿಸಬಹುದು ಎಂದು ಹೇಳಿದ್ದೆ. ಡಿಸೆಂಬರ್ ಅಥವಾ ಜನವರಿ ಒಳಗೆ ವರದಿ ನೀಡುವಂತೆ ಹೇಳಿದ್ದೇನೆ ಎಂದು ಹೇಳಿದರು.

ಇದೇ ವೇಳೆ ಕಾಂತರಾಜು ಆಯೋಗದ ವರದಿಯ ಮೂಲ ಕರಡು ನಾಪತ್ತೆಯಾಗಿದೆ ಎಂಬ ಹೆಗ್ಡೆಯವರ ಹೇಳಿಕೆಯ ಕುರಿತು ಮಾತನಾಡಿ, ಇದರ ಬಗ್ಗೆ ನನಗೆ ತಿಳಿದಿಲ್ಲ ಎಂದರು.

SCROLL FOR NEXT