ರಾಜ್ಯ

ಬರ ಪರಿಹಾರ ಮನವಿ ಬಗ್ಗೆ ಶೀಘ್ರ ನಿರ್ಧಾರ ಕೈಗೊಂಡು ನೆರವು ಬಿಡುಗಡೆಗೊಳಿಸಿ: ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ

Manjula VN

ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಬರ ಘೋಷಣೆ ಮಾಡಲಾಗಿದ್ದು, ಕೇಂದ್ರ ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಲಾಗಿದೆ. ಈ ಸಂಬಂಧ ಶೀಘ್ರ ನಿರ್ಧಾರ ತೆಗೆದುಕೊಂಡು ಬರ ಪರಿಹಾರ ಹಣ ಬಿಡುಗಡೆಗೊಳಿಸಿ ಎಂದು ಕೇಂದ್ರ ಹಣಕಾಸು ಸಚಿವರ ಬಳಿ ಮನವಿ ಸಲ್ಲಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಗುರುವಾರ ಹೇಳಿದರು.

ಕೃಷಿ ಸಚಿವರಾದ ಚೆಲುವರಾಯಸ್ವಾಮಿ ಅವರ ಜೊತೆಗೂಡಿ ಗುರುವಾರ ದೆಹಲಿಯಲ್ಲಿ ಸಚಿವರಾದ ನಿರ್ಮಲಾ ಸೀತಾರಾಮನ್ ಅವರ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದ 223 ತಾಲೂಕುಗಳನ್ನು ಈಗಾಗಲೇ ಬರ ಪೀಡಿತ ಎಂದು ಘೋಷಿಸಲಾಗಿದೆ. ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ.

ಪರಿಹಾರದ ಹಣವನ್ನು ವಿಳಂಭವಿಲ್ಲದೆ ಪಾರದರ್ಶಕವಾಗಿ ಮತ್ತು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ತಲುಪಿಸುವ ಸಂಬಂಧ ಅಗತ್ಯ ಎಲ್ಲಾ ಕ್ರಮಗಳನ್ನೂ ರಾಜ್ಯ ಸರ್ಕಾರ ಈಗಾಗಲೇ ಕೈಗೊಂಡಿದೆ. ಹೀಗಾಗಿ ಕೇಂದ್ರ ಸರ್ಕಾರ ಪರಿಹಾರದ ಹಣ ಬಿಡುಗಡೆ ಮಾಡುತ್ತಿದ್ದಂತೆ ಆ ಹಣವನ್ನು ವಿಳಂಭವಿಲ್ಲದೆ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು ಎಂಬುದನ್ನೂ ನಿರ್ಮಲಾ ಸೀತಾರಾಮನ್ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ವಿವರಿಸಿದರು.

ರಾಜ್ಯದಲ್ಲಿರುವ ಸಣ್ಣ ಮತ್ತು ಅತಿಸಣ್ಣ ರೈತರ ನಿಖರ ಅಂಕಿಸಂಖ್ಯೆಯ ಮಾಹಿತಿಯ ಬಗ್ಗೆಯೂ ಸಚಿವರಾದ ನಿರ್ಮಲಾ ಸೀತಾರಾಮನ್ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಪಿಎಂ ಕಿಸಾನ್ ಮತ್ತು ಆಧಾರ್ ಲಿಂಕ್ "ಫ್ರೂಟ್ಸ್" ಡೇಟಾಬೇಸ್ ಪ್ರಕಾರ ರಾಜ್ಯದಲ್ಲಿ ಕನಿಷ್ಟ ಶೇ.70ಕ್ಕೂ ಅಧಿಕ ಸಂಖ್ಯೆಯಲ್ಲಿ ಸಣ್ಣ- ಅತಿಸಣ್ಣ ರೈತರಿದ್ದಾರೆ. ಆದರೆ, ಕೇಂದ್ರ ಸರ್ಕಾರದ 2015ರ ಕೃಷಿ ಗಣತಿಯ ಪ್ರಕಾರ ರಾಜ್ಯದಲ್ಲಿ ಸಣ್ಣ-ಅತಿಸಣ್ಣ ರೈತರ ಸಂಖ್ಯೆ ಶೇ.44 ಎನ್ನುತ್ತಿವೆ. ಇದರಿಂದಾಗಿ ರಾಜ್ಯದ ರೈತರಿಗೆ ಪರಿಹಾರದಲ್ಲೂ ಅನ್ಯಾಯವಾಗಲಿದೆ.

ಹೀಗಾಗಿ ಕೇಂದ್ರ ಸರ್ಕಾರ ರಾಜ್ಯದ ನವೀಕೃತ ಡೇಟಾಬೇಸ್ ಮಾಹಿತಿಯನ್ನು ಆಧರಿಸಿ ಪರಿಹಾರ ಬಿಡುಗಡೆಗೊಳಿಸಬೇಕು. ಅಲ್ಲದೆ, ಪರಿಹಾರ ಹಣ ಬಿಡುಗಡೆ ಮಾಡುವ ಸಂದರ್ಭದಲ್ಲಿ ಕೇಂದ್ರದ ಮಾನದಂಡದಂತೆ ಸಾಧಾರಣ ಬರ ಎಂದು ಘೋಷಿಸಿರುವ ತಾಲೂಕುಗಳನ್ನೂ ಸಹ ಪರಿಹಾರಕ್ಕೆ ಪರಿಗಣಿಸಿ ಎಂದು ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ.

ರಾಜ್ಯದಲ್ಲಿ ವಿಮಾ ಕಂಪೆನಿಗಳು ಸಮಯಕ್ಕೆ ಸರಿಯಾಗಿ ರೈತರಿಗೆ ಬೆಳೆ ವಿಮೆ ಹಣ ಪಾವತಿಸದೆ ವಿಳಂಭ ಧೋರಣೆ ಅನುಸರಿಸುತ್ತಿವೆ, ಇದರಿಂದಲೂ ರೈತರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದು ಮನವಿ ಮಾಡಲಾಗಿದೆ. ಇದಕ್ಕೆ ನಿರ್ಮಲಾ ಸೀತಾರಾಮನ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ವಿಮಾ ಕಂಪೆನಿಗಳಿಗೆ ಶೀಘ್ರವೇ ಬೆಳೆ ವಿಮೆ ಹಣ ಬಿಡುಗಡೆ ಮಾಡುವಂತೆ ಸೂಚಿಸುವುದಾಗಿ ತಿಳಿಸಿದ್ದಾರೆಂದು ಮಾಹಿತಿ ನೀಡಿದರು.

SCROLL FOR NEXT