ರಾಜ್ಯ

ಚಿತ್ರದುರ್ಗ: ಮಂಗಳಮುಖಿ ಸಾಕಿದ್ದ 10 ಲಕ್ಷ ರೂ ಮೌಲ್ಯದ ಕುರಿ, ಮೇಕೆಗಳ ಕದ್ದೊಯ್ದ ಕಳ್ಳರು!

Manjula VN

ಚಿತ್ರದುರ್ಗ: ಸ್ವಾವಲಂಬಿ ಬದುಕು ಕಟ್ಟಿಕೊಂಡು ಜೀವನ ನಡೆಸುತ್ತಿದ್ದ ಮಂಗಳಮುಖಿಯೊಬ್ಬರಿಗೆ ಸೇರಿದ 10 ಲಕ್ಷ ರೂ ಮೌಲ್ಯದ ಕುರಿ, ಮೇಕೆಗಳನ್ನು ಖದೀಮರು ಕದ್ದೊಯ್ದಿರುವ ಘಟನೆ ನಡೆದಿದೆ.

ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ಸಮೀಪದ ಕೊಳಹಾಳ್‌ ಬಳಿ ಅರುಂಧತಿ ಅವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕುರಿ ಸಾಕಾಣಿಕೆ ಶೆಡ್‌ ನಿರ್ಮಿಸಿಕೊಂಡು ಅದರಲ್ಲಿ ಹೈನುಗಾರಿಕೆ, ಮೇಕೆ ಮತ್ತು ಕುರಿ ಸಾಕಾಣಿಕೆ ಮಾಡಿಕೊಂಡು ಬದುಕು ಸಾಗಿಸುತ್ತಿದ್ದರು. ಆದರೆ, ಕುರಿ ಶೇಡ್‌ನಲ್ಲಿದ್ದ ಕುರಿಗಳನ್ನು ಯಾರೋ ಕಳ್ಳರು ಕದ್ದೊಯ್ದಿದ್ದು, ಇದರಿಂದ ಮಂಗಳಮುಖಿ ಅರುಂಧತಿ ಕಂಗಾಲಾಗಿದ್ದಾರೆ.

ಬುಧವಾರ ಎಂದಿನಂತೆ ಕುರಿ ಮತ್ತು ಮೇಕೆಗಳನ್ನು ಮೇಯಿಸಿ ಅವುಗಳನ್ನು ಶೆಡ್‌ನಲ್ಲಿ ಕೂಡಿ, ಮೇವು ಹಾಕಿ ಸಂಘಟನೆಯ ಕೆಲಸದಲ್ಲಿ ಭಾಗಿಯಾಗಲು ಚಿಕ್ಕಮಗಳೂರಿಗೆ ಹೋಗಿದ್ದಾರೆ.

ಜೊತೆಗಿದ್ದವರು ಬೆಳಗ್ಗೆ ಶೆಡ್‌ನತ್ತ ಕಣ್ಣು ಹಾಯಿಸಿದಾಗ ಅದರ ಬೀಗ ಒಡೆದು, ಸರಪಳಿ ಬಿಚ್ಚಿರುವುದನ್ನು ಕಂಡಿದ್ದಾರೆ. ಕೂಡಲೇ ಅರುಂಧತಿಗೆ ಫೋನ್‌ ಮೂಲಕ ವಿಷಯ ತಿಳಿಸುತ್ತಿದ್ದಂತೆ ಧಾವಿಸಿ ಮಧ್ಯಾಹ್ನದ ಹೊತ್ತಿಗೆ ಬಂದ ಅವರು, ಅಕ್ಕಪಕ್ಕದ ಜಮೀನುಗಳಲ್ಲಿ ಪ್ರಾಣಿಗಳಿಗೆ ತಡಕಾಡಿದ್ದಾರೆ. ಎಲ್ಲಿಯೂ ತನ್ನ ಸಾಕು ಪ್ರಾಣಿಗಳು ಕಾಣದೇ ಇದ್ದಾಗ ಭರಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

'ದೂರು ದಾಖಲಾಗಿದ್ದರೂ ಭರಮಸಾಗರ ಪೊಲೀಸರು ಇನ್ನೂ ಕ್ರಮಕೈಗೊಂಡಿಲ್ಲ. ನಾನು ಸ್ವಂತವಾಗಿ ಜೀವನ ನಡೆಸಬೇಕೆಂದು ಬಯಸಿದ್ದೆ. ಆದರೆ. 10 ಲಕ್ಷಕ್ಕೂ ಹೆಚ್ಚು ಮೌಲ್ಯದ ನನ್ನ ಎಲ್ಲಾ ಜಾನುವಾರುಗಳನ್ನು ಕಳ್ಳತನ ಮಾಡಲಾಗಿದೆ. ಕಳ್ಳರನ್ನು ಪೊಲೀಸರು ಪತ್ತೆ ಮಾಡಿಲ್ಲ. ಸೋಮವಾರ ಅಲೋಕ್ ಮೋಹನ್ ಅವರನ್ನು ಭೇಟಿ ಮಾಡುತ್ತೇನೆ ಮತ್ತು ಕ್ರಮ ಕೈಗೊಳ್ಳಲು ನ್ಯಾಯವ್ಯಾಪ್ತಿಯ ಪೊಲೀಸರಿಗೆ ನಿರ್ದೇಶನ ನೀಡುವಂತೆ ಒತ್ತಾಯಿಸುತ್ತೇನೆಂದು ಅರುಂಧತಿ ಅವರು ಹೇಳಿದ್ದಾರೆ.

SCROLL FOR NEXT