ರಾಜ್ಯ

ನಮ್ಮ ಮೆಟ್ರೋ ರೈಲಿನಲ್ಲಿ ಸಿಕ್ಕ ಚಿನ್ನದ ಉಂಗುರವನ್ನು ಹಿಂದಿರುಗಿಸಿದ ಹೋಂ ಗಾರ್ಡ್ಸ್; ಪ್ರಾಮಾಣಿಕತೆಗೆ ಮೆಚ್ಚುಗೆ!

Ramyashree GN

ಬೆಂಗಳೂರು: ಜನನಿಬಿಡ ನೇರಳೆ ಮಾರ್ಗದಲ್ಲಿ ಸೋಮವಾರ ಸಂಜೆ ಮೆಟ್ರೋ ಪ್ರಯಾಣದ ವೇಳೆ 30,000 ರೂ.ಗೂ ಅಧಿಕ ಮೌಲ್ಯದ ಚಿನ್ನದ ಉಂಗುರ ಕಳೆದುಕೊಂಡಿದ್ದ ಬ್ಯಾಂಕ್ ಉದ್ಯೋಗಿಯೊಬ್ಬರು ಮಂಗಳವಾರ ಅದನ್ನು ಮರಳಿ ಪಡೆದಿದ್ದಾರೆ. ಇದಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ (ಬಿಎಂಆರ್‌ಸಿಎಲ್) ಪ್ರಾಮಾಣಿಕ ಹೋಂಗಾರ್ಡ್‌ಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹೊಸಕೋಟೆ ಶಾಖೆಯಲ್ಲಿ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿರುವ ದಿವ್ಯಾ ಪ್ರಿಯದರ್ಶಿನಿ ಅವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೆಟ್ರೋ ನಿಲ್ದಾಣದಿಂದ ಬೆನ್ನಿಗಾನಹಳ್ಳಿ ನಿಲ್ದಾಣಕ್ಕೆ ಮೆಟ್ರೋದಲ್ಲಿ ಪ್ರಯಾಣಿಸಿ, ಅಲ್ಲಿಂದ ತಮ್ಮ ಕಚೇರಿಗೆ ಬಸ್‌ನಲ್ಲಿ ಹೋಗುತ್ತಾರೆ. 

ಈ ಕುರಿತು ಟಿಎನ್ಐಇ ಜೊತೆ ಮಾತನಾಡಿದ ಅವರು, 'ನಾನು ಸೋಮವಾರ ಕೆಲಸದಿಂದ ಹೆಚ್ಚಿನ ಜನಸಂದಣಿಯಿದ್ದ ರೈಲಿನಲ್ಲಿ ಹಿಂತಿರುಗುತ್ತಿದ್ದೆ. ನಾನು ಕೆಎಸ್‌ಆರ್ ಮೆಟ್ರೋ ನಿಲ್ದಾಣದಿಂದ ಹೊರಡುವಾಗ ಉಂಗುರ ಕಾಣೆಯಾಗಿರುವುದನ್ನು ಅರಿತು ಕಸ್ಟಮರ್ ಕೇರ್‌ಗೆ ಹೋಗಿ ರೈಲಿನಲ್ಲಿ ಅದನ್ನು ಕಳೆದುಕೊಂಡಿರಬಹುದೆಂದು ಹೇಳಿದೆ. ಬಳಿಕ ಸ್ಟೇಷನ್ ಕಂಟ್ರೋಲರ್‌ ಉಂಗುರವನ್ನು ಪತ್ತೆಹಚ್ಚಲು ತಮ್ಮ ಕೈಲಾದಷ್ಟು ಪ್ರಯತ್ನಿಸುವುದಾಗಿ ಮತ್ತು ಎಲ್ಲಾ ನಿಲ್ದಾಣಗಳಿಗೆ ಸಂದೇಶವನ್ನು ರವಾನಿಸಲಾಗುವುದು ಎಂದು ನನಗೆ ಭರವಸೆ ನೀಡಿದರು' ಎಂದರು.

ಸೋಮವಾರ ಸಂಜೆ 6.45ರ ಸುಮಾರಿಗೆ ಬೆನ್ನಿಗಾನಹಳ್ಳಿ ಮೆಟ್ರೊ ನಿಲ್ದಾಣದ 2ನೇ ಪ್ಲಾಟ್‌ಫಾರ್ಮ್‌ನಲ್ಲಿ ರೈಲು ನಿಂತಾಗ ರೈಲಿನ ಲೇಡಿಸ್ ಕೋಚ್ ಬಳಿ ಬಿದ್ದಿದ್ದ ಉಂಗುರವನ್ನು ಗಮನಿಸಿದ ಹೋಂಗಾರ್ಡ್‌ಗಳಾದ ಶಿಲ್ಪಾ ಜಿ ಆರ್ ಮತ್ತು ಈಶ್ವರಮ್ಮ ಅವರು ಬಿಎಂಆರ್‌ಸಿಎಲ್ ಸಹಾಯಕ ಸುರಕ್ಷತಾ ಅಧಿಕಾರಿ ಕೆಎನ್ ರಾಜಣ್ಣ ಅವರಿಗೆ ಅದನ್ನು ಹಸ್ತಾಂತರಿಸಿದ್ದಾರೆ.

ಬಳಿಕ ಸೋಮವಾರ ರಾತ್ರಿ, ಬೆನ್ನಿಗಾನಹಳ್ಳಿ ನಿಲ್ದಾಣದಲ್ಲಿ ಪತ್ತೆಯಾದ ಉಂಗುರದ ಬಗ್ಗೆ ದಿವ್ಯಾ ಅವರಿಗೆ ಕರೆ ಬಂದಿದ್ದು, ಅದು ಅವರದ್ದೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಮತ್ತು ಖರೀದಿಸಿದ ಕೆಲವು ಪುರಾವೆಗಳನ್ನು ನೀಡುವಂತೆ ಕೇಳಲಾಗಿದೆ. ಮರುದಿನ ಬೆಳಿಗ್ಗೆ ದಿವ್ಯಾ ಅವರು ನಿಲ್ದಾಣದ ನಿಯಂತ್ರಣ ಕೊಠಡಿಗೆ ಭೇಟಿ ನೀಡಿ, ತನ್ನ ಫೋನ್‌ನಲ್ಲಿದ್ದ ಉಂಗುರದ ಚಿತ್ರಗಳನ್ನು ತೋರಿಸಿದ್ದಾರೆ. 

'ಕಳೆದುಹೊಗಿದ್ದ ಉಂಗುರ ಮತ್ತೆ ನನಗೆ ಸಿಕ್ಕಿದ್ದು ನಿಜವಾಗಿಯೂ ನನಗೆ ಸಂತೋಷವಾಯಿತು' ಎಂದು ಅವರು ಹೇಳಿದರು.

SCROLL FOR NEXT