ರಾಜ್ಯ

ಶಾಸಕ ಬಿ ಆರ್ ಪಾಟೀಲ್ ಗೆ ನನ್ನನ್ನು ಬಂದು ಭೇಟಿಯಾಗುವಂತೆ ಹೇಳಿದ್ದೇನೆ: CM Siddaramaiah

Sumana Upadhyaya

ಬೆಂಗಳೂರು: ಕೆಲವು ಶಾಸಕರು ಅಸಮಾಧಾನಗೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಮಾಧ್ಯಮಗಳಿಗೆ ಸಿಕ್ಕಿ ಈ ಹಿಂದೆ ಬಹಳ ದೊಡ್ಡ ಸುದ್ದಿಯಾಗಿತ್ತು. ನಂತರ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಶಾಸಕಾಂಗ ಸಭೆ ಕರೆದು ಅಸಮಾಧಾನಿತ ಶಾಸಕರಿಗೆ ಸಮಾಧಾನ, ಬುದ್ಧಿವಾದ ಹೇಳಿದ್ದರು.

ಕಾಂಗ್ರೆಸ್ ಸರ್ಕಾರದಲ್ಲಿ ಶಾಸಕ ಅಸಮಾಧಾನ ಮತ್ತೆ ಭುಗಿಲೆದ್ದಿದೆ. ಈ ಹಿಂದೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆ ಬಸವರಾಜ ರಾಯರೆಡ್ಡಿ, ಬಿ ಕೆ ಹರಿಪ್ರಸಾದ್‌ ಸೇರಿದಂತೆ ಹಲವು ನಾಯಕರು ಸಿದ್ದರಾಮಯ್ಯ ಹಾಗೂ ಹೈಕಮಾಂಡ್‌ ನಾಯಕರ ವಿರುದ್ದ ಅಸಮಾಧಾನಕ್ಕೆ ಹೊರಹಾಕಿದ್ದರು.

ಈ ಹಿಂದೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದ ಆಳಂದ ಕಾಂಗ್ರೆಸ್‌ ಶಾಸಕ ಬಿ ಆರ್ ಪಾಟೀಲ್ ಮತ್ತೆ ಸ್ವಪಕ್ಷ ಮತ್ತು ಸರ್ಕಾರ ಆಡಳಿತ ವಿರುದ್ಧ ಸಿಡಿದೆದ್ದಿದ್ದಾರೆ.

ಮುಖ್ಯಮಂತ್ರಿಗಳಿಗೆ ಪತ್ರ ಬರೆದು ನಾನು ರಾಜೀನಾಮೆ ನೀಡುತ್ತೇನೆ ಎಂದು ಆಳಂದ ಕಾಂಗ್ರೆಸ್‌ ಶಾಸಕ ಬಿ ಆರ್‌ ಪಾಟೀಲ್‌ ಹೇಳಿದ್ದು, ಲೋಕಸಭಾ ಚುನಾವಣಾ ಹೊತ್ತಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಗೆ ದೊಡ್ಡ ಸವಾಲಾಗಿ ಪರಿಣಾಮಿಸಿದೆ. ಆಳಂದ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಅವರು ಬಹಿರಂಗವಾಗಿಯೇ ಸಚಿವ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ವಿರುದ್ಧ ಸಿಡಿದೆದ್ದಿದ್ದಾರೆ. ಅಲ್ಲದೇ ಈ ಸಂಬಂಧ ನೇರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.

ಬಿಆರ್‌ ಪಾಟೀಲರ ಆಕ್ರೋಶಕ್ಕೆ ಕಾರಣವೇನು? ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತದಿಂದ ಕಾಮಗಾರಿ ನಡೆಸಿದ್ದು, ಅದರ ಕುರಿತು ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ವಿರುದ್ಧ ಆಳಂದ ಕಾಂಗ್ರೆಸ್‌ ಶಾಸಕ ಬಿ ಆರ್‌ ಪಾಟೀಲ್‌ ಆಕ್ರೋಶ ಹೊರ ಹಾಕಿದ್ದಾರೆ. ಕೆಆರ್‌ಐಡಿಎಲ್‌ ಕಾಮಗಾರಿಗಳನ್ನು ಲಂಚ ಪಡೆದು ನೀಡಿದ್ದೇನೆಂಬ ಆರೋಪ ತಮ್ಮ ಮೇಲೆ ಮಾಡುತ್ತಿದ್ದಾರೆ. ಇಂತಹ ಆರೋಪಗಳನ್ನು ಹೊತ್ತು ನಾನು ಬೆಳಗಾವಿಯಲ್ಲಿ ನಡೆಯುವ ಅಧಿವೇಶನಕ್ಕೆ ಹಾಜರಾಗುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಹೇಳಿದ್ದೇನು: ನಾನಿವತ್ತು ಬಿ ಆರ್ ಪಾಟೀಲ್ ಜೊತೆ ಮಾತನಾಡಿದ್ದೇನೆ. ನಿನ್ನೆಯೇ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೆ. ಆದರೆ ಅವರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಇಂದು ಬೆಳಗ್ಗೆ ಅವರೊಂದಿಗೆ ಮಾತನಾಡಿದೆ. ನನ್ನನ್ನು ಬಂದು ಭೇಟಿಯಾಗುವಂತೆ ಹೇಳಿದ್ದೇನೆ. ಅವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುತ್ತೇವೆ ಎಂದರು.

SCROLL FOR NEXT