ರಾಜ್ಯ

ಬೆಂಗಳೂರು ಟೆಕ್ ಸಮ್ಮಿಟ್ 2023: ಸ್ಟಾರ್ಟ್‌ಅಪ್‌ಗಳ 35 ನವೀನ ಉತ್ಪನ್ನಗಳು, ಪರಿಹಾರ ಅನಾವರಣ

Nagaraja AB

ಬೆಂಗಳೂರು: ಬೆಂಗಳೂರು ಟೆಕ್ ಶೃಂಗಸಭೆ 2023 ರ 26 ನೇ ಆವೃತ್ತಿಯಲ್ಲಿ ಸ್ಟಾರ್ಟ್‌ಅಪ್‌ಗಳು ಅಭಿವೃದ್ಧಿಪಡಿಸಿದ 35  ನವೀನ ಉತ್ಪನ್ನಗಳು ಮತ್ತು ಪರಿಹಾರಗಳನ್ನು ರಾಜ್ಯ ಸರ್ಕಾರ ಅನಾವರಣಗೊಳಿಸಿದೆ.

35 ಸ್ಟಾರ್ಟ್‌ಅಪ್‌ಗಳಲ್ಲಿ ಒಂಬತ್ತು ಮಹಿಳಾ ನೇತೃತ್ವದಾಗಿದ್ದು, ಕರ್ನಾಟಕದ ಸ್ಟಾರ್ಟ್ ಅಪ್ ಗಳ ಪರಿಸರ ವ್ಯವಸ್ಥೆಯ ಅಂತರ್ಗತ ಮತ್ತು ವೈವಿಧ್ಯಮಯ ಸ್ವರೂಪವನ್ನು ಒತ್ತಿಹೇಳುತ್ತದೆ ಎಂದು ರಾಜ್ಯ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ  ಪ್ರಕಟಣೆ ತಿಳಿಸಿದೆ.

ಹಲವಾರು ಸ್ಟಾರ್ಟ್‌ಅಪ್‌ಗಳು ರಾಜ್ಯದ ಸೀಡ್ ಫಂಡಿಂಗ್ ಕಾರ್ಯಕ್ರಮದ ಮೂಲಕ ಹಣಕಾಸಿನ ನೆರವು ಪಡೆದಿವೆ. ಇದು ಉದ್ಯಮಶೀಲ ಪ್ರತಿಭೆ ಪೋಷಿಸಲು ಮತ್ತು ನಾವೀನ್ಯತೆಯ ಸಂಸ್ಕೃತಿ ಬೆಳೆಸಲು ಸರ್ಕಾರದ ಬದ್ಧತೆಯನ್ನು ಸೂಚಿಸುತ್ತದೆ ಎಂದು ಅದು ಹೇಳಿದೆ. 

ಬಹುಪಾಲು ಸ್ಟಾರ್ಟ್‌ಅಪ್‌ಗಳು ಕರ್ನಾಟಕ ಸರ್ಕಾರದ ಬೆಂಬಲಿತ ಇನ್‌ಕ್ಯುಬೇಟರ್‌ಗಳಲ್ಲಿ ಪ್ರವರ್ಧಮಾನಕ್ಕೆ ಬಂದಿವೆ, ಉದಾಹರಣೆಗೆ ಕೆ-ಟೆಕ್ ಇನ್ನೋವೇಶನ್ ಹಬ್‌,  ಸೆಂಟರ್ಸ್ ಆಫ್ ಎಕ್ಸಲೆನ್ಸ್ (ಸಿಒಇಗಳು), ಟೆಕ್ನಾಲಜಿ ಬಿಸಿನೆಸ್ ಇನ್‌ಕ್ಯುಬೇಟರ್‌ಗಳು (ಟಿಬಿಐಗಳು) ಸಿ-ಕ್ಯಾಂಪ್, ನಾಸ್ಕಾಮ್, ಜೈನ್ ಇನ್‌ಕ್ಯುಬೇಷನ್‌ ಮತ್ತು ದೇಶಪಾಂಡೆ ಸ್ಟಾರ್ಟ್‌ಅಪ್‌ಗಳು ಮತ್ತು ಸಿಒಇ - ಸೈಬರ್‌ ಸೆಕ್ಯುರಿಟಿಯಂತಹ ಸಂಸ್ಥೆಗಳಿಂದ ಪ್ರವರ್ಧಮಾನಕ್ಕೆ ಬಂದಿವೆ ಎಂದು ಪ್ರಕಟಣೆ ತಿಳಿಸಿದೆ. 

ಐಟಿ, ಅಗ್ರಿ-ಟೆಕ್, ಮೆಡ್-ಟೆಕ್, ಹೆಲ್ತ್‌ಕೇರ್, ಕ್ಲೀನ್-ಟೆಕ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ), ಡೀಪ್ ಟೆಕ್, ಬ್ಲಾಕ್‌ಚೈನ್, ಸೈಬರ್ ಸೆಕ್ಯುರಿಟಿ ಮತ್ತು ಎನ್ವಿರಾನ್‌ಮೆಂಟ್ ಟೆಕ್ ಸೇರಿದಂತೆ ವಿವಿಧ ವಲಯಗಳಿಂದ ಉತ್ಪನ್ನಗಳು ಮತ್ತು ಪರಿಹಾರಗಳನ್ನು ಪ್ರಾರಂಭಿಸಲಾಗಿದೆ. 

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ (IoT)  ಸಂಯೋಜಿಸುವ ಎಲೆಕ್ಟ್ರಾನಿಕ್ ಸಾಧನಗಳು, ವಾಹನ ತಯಾರಿಕೆಯಲ್ಲಿನ ತಂತ್ರಜ್ಞಾನ, ಪಾದರಕ್ಷೆಗಳು ಮತ್ತು ಪರಿಕರಗಳಲ್ಲಿನ ಆವಿಷ್ಕಾರಗಳು, ಏವಿಯಾನಿಕ್ಸ್ ಮತ್ತು ರಕ್ಷಣೆಯಲ್ಲಿನ ತಂತ್ರಜ್ಞಾನಗಳು ಸೇರಿದಂತೆ ಮತ್ತಿತರ ಪರಿಹಾರಗಳನ್ನು ಒಳಗೊಂಡಿದೆ. 

SCROLL FOR NEXT