ಕಲಬುರಗಿ: ಆಳಂದ ತಾಲ್ಲೂಕಿನ ಕಡಗಂಚಿ ಕೇಂದ್ರೀಯ ವಿಶ್ವವಿದ್ಯಾಲಯದ ಎದುರಿನ ಮುಖ್ಯರಸ್ತೆಯಲ್ಲಿ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಶನಿವಾರ ವಿದ್ಯಾರ್ಥಿ ಮತ್ತು ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಮೃತರನ್ನು ಆಳಂದ ಪಟ್ಟಣದ ಅಶೋಕ ಇಂಗಳೆ (48) ಮತ್ತು ವಿದ್ಯಾರ್ಥಿ ಸಲಾವುದ್ದೀನ್ ಅಹ್ಮದ್ (15) ಎಂದು ಗುರುತಿಸಲಾಗಿದೆ.
ಪಟ್ಟಣದ ಶಾಲೆಯೊಂದರಲ್ಲಿ ಒಂಬತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯು ಪರೀಕ್ಷೆ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಮನೆ ಸಮೀಪದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಶೋಕ ಎಂಬುವವರು ವಿದ್ಯಾರ್ಥಿಯನ್ನು ಬೈಕ್ ಮೇಲೆ ಕರೆದೊಯ್ಯುತ್ತಿದ್ದಾಗ ಎದುರಿಗೆ ಬಂದ ಲಾರಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಅಶೋಕ ಸ್ಥಳದಲ್ಲೇ ಮೃತಪಟ್ಟರೆ, ವಿದ್ಯಾರ್ಥಿಯು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾನೆ.