ರಾಜ್ಯ

ವನ್ಯಜೀವಿಗಳ ಸಂರಕ್ಷಣೆಗಾಗಿ ವಿಂಟೇಜ್ ವಾಹನ ಯಾನಕ್ಕೆ ರಾಜ್ಯಪಾಲರ ಚಾಲನೆ

Manjula VN

ಬೆಂಗಳೂರು: ವನ್ಯಜೀವಿಗಳ ಸಂರಕ್ಷಣೆಗಾಗಿ ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ವಿಂಟೇಜ್ ವಾಹನ ಯಾನಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಭಾನುವಾರ ರಾಜಭವನದಲ್ಲಿ ಚಾಲನೆ ನೀಡಿದರು.

ಅರಣ್ಯ ಇಲಾಖೆ 69ನೇ ವನ್ಯಜೀವಿ ಸಪ್ತಾಹ-2023ದಡಿ ವನ್ಯಜೀವಿ ಸಂರಕ್ಷಣೆಯಲ್ಲಿ ಪಾಲುದಾರಿಕೆ ಧ್ಯೇಯ ವಾಕ್ಯದಡಿ ವಿವಿಧ ಕಾರ್ಯಕ್ರಮ ಆಯೋಜಿಸಿದ್ದು, ಜನಜಾಗೃತಿಗಾಗಿ ವಿಂಟೇಜ್ ವಾಹನ ಯಾನ ಹಮ್ಮಿಕೊಂಡಿತ್ತು.

ವಿಂಟೇಜ್ ವಾಹನ ಯಾನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ರಾಜ್ಯಪಾಲರು, ಪ್ರಾಚೀನ ಗ್ರಂಥಗಳಲ್ಲಿ ಪ್ರಾಣಿಗಳ ರಕ್ಷಣೆ ಮತ್ತು ಸಂರಕ್ಷಣೆ ಕುರಿತು ಉಲ್ಲೇಖವಿದೆ. ಮಾನವರು ಮತ್ತು ವನ್ಯಜೀವಿಗಳು ಯುಗ ಯುಗಗಳಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ, ಇಂದು ಈ ವನ್ಯಜೀವಿಗಳ ಸಂರಕ್ಷಣೆಯ ಅವಶ್ಯಕತೆಯಿದೆ. ವನ್ಯಜೀವಿಗಳನ್ನು ಸಂರಕ್ಷಿಸಲು, ಕಾಡುಗಳು ಸಮೃದ್ಧವಾಗಿರುವುದು ಬಹಳ ಮುಖ್ಯ ಎಂದು ಹೇಳಿದರು.

ಕರ್ನಾಟಕದ ರಾಜ್ಯದಲ್ಲಿ ಅರಣ್ಯ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇಡೀ ದೇಶದಲ್ಲಿ ಅರಣ್ಯ ಸಂರಕ್ಷಣೆಯಲ್ಲಿ ರಾಜ್ಯ ಅಗ್ರ ಸ್ಥಾನದಲ್ಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ವಿಶೇಷವಾಗಿ ಅರಣ್ಯ ಇಲಾಖೆ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ ಎಂದು ಶ್ಲಾಘಿಸಿದರು.

’ಪರಿಸರ ಸಂರಕ್ಷಣಾ ಕಾಯಿದೆ’, ’ಅರಣ್ಯ ಸಂರಕ್ಷಣಾ ಕಾಯ್ದೆ’, ’ರಾಷ್ಟ್ರೀಯ ವನ್ಯಜೀವಿ ಕ್ರಿಯಾ ಯೋಜನೆ’, ’ಪ್ರಾಜೆಕ್ಟ್ ಹುಲಿ’, ’ರಾಷ್ಟ್ರೀಯ ಉದ್ಯಾನಗಳು ಮತ್ತು ಅಭಯಾರಣ್ಯಗಳು’, ’ಭಾರತದಲ್ಲಿ ಅರಣ್ಯಗಳು ಮತ್ತು ವನ್ಯಜೀವಿಗಳ ರಕ್ಷಣೆಗಾಗಿ ಜೈವಿಕ-ಪ್ರಾದೇಶಿಕ ಮೀಸಲು ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಈ ಯೋಜನೆಗಳಿಂದಾಗಿ ಕೆಲವು ಜಾತಿಗಳ ಅಳಿವಿನಂಚಿನಿಂದ ಉಳಿಸಲಾಗಿದೆ ಎಂದು ತಿಳಿಸಿದರು.

69ನೇ ವನ್ಯಜೀವಿ ಸಪ್ತಾಹದ ಪ್ರಾರಂಭದ ಸಂದರ್ಭದಲ್ಲಿ ವನ್ಯಜೀವಿ ಸಂರಕ್ಷಣೆಗಾಗಿ ಜಾಗೃತಿ ಮೂಡಿಸಲು ಭಾರತೀಯ ವಿಂಟೇಜ್ ವಾಹನಗಳ ಒಕ್ಕೂಟದ ಸಹಯೋಗದೊಂದಿಗೆ ಅರಣ್ಯ ಇಲಾಖೆಯು ಈ ಡ್ರೈವ್ ಆಯೋಜಿಸಿರುವುದು ಉತ್ತಮ ಕಾರ್ಯವಾಗಿದೆ. ಈ ವಿಂಟೇಜ್ ವಾಹನ ಯಾನ ವನ್ಯಜೀವಿ ಸಂರಕ್ಷಣೆಯ ಕಡೆಗೆ ಸಕಾರಾತ್ಮಕ ಕೆಲಸ ಸ್ಫೂರ್ತಿ ನೀಡಲಿ ಎಂದರು.

SCROLL FOR NEXT