ರಾಜ್ಯ

ಆಸ್ತಿ ತೆರಿಗೆ ವಸೂಲಿಗೆ ಶೀಘ್ರದಲ್ಲೇ ಹೊಸ ವ್ಯವಸ್ಥೆ ಜಾರಿ: ಡಿಕೆ.ಶಿವಕುಮಾರ್

Manjula VN

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹ ನಿರೀಕ್ಷಿತ ಮಟ್ಟದಲ್ಲಿ‌ ನಡೆಯದ ಹಿನ್ನೆಲೆ ಹೊಸ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಗುರುವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ ಉಪ‌ ಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಖಾತೆ ಹೊಂದಿರುವ ಡಿ.ಕೆ ಶಿವಕುಮಾರ್ ಅವರು, ಬಿಬಿಎಂಪಿಯ ತೆರಿಗೆ ಸಂಗ್ರಹ ನನಗೆ ತೃಪ್ತಿ ನೀಡಿಲ್ಲ. ಸಂಗ್ರಹವಾಗುತ್ತಿರುವುದು ಕೇವಲ 3 ಸಾವಿರ ಕೋಟಿ ರೂ.ಗಳು ಮಾತ್ರ. ಇಷ್ಟು ಹಣದಲ್ಲಿ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ಸರ್ಕಾರ ಬೆಂಗಳೂರಿನ ಅಭಿವೃದ್ಧಿಗೆ ಪದೇಪದೇ ಹಣ ನೀಡಲಾಗುವುದಿಲ್ಲ. ಅದಕ್ಕಾಗಿ ಪರಿಣಾಮಕಾರಿ ತೆರಿಗೆ ಸಂಗ್ರಹಕ್ಕೆ ಹೊಸ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಕೇಂದ್ರ, ರಾಜ್ಯ ಸರ್ಕಾರಗಳ ಕಟ್ಟಡಗಳು ಬಾಕಿ ಉಳಿಸಿಕೊಂಡಿರುವ ತೆರಿಗೆಯನ್ನು ವಸೂಲಿ ಮಾಡಲು ಸೂಚಿಸಲಾಗಿದೆ. ತಾವೇ ಖುದ್ದಾಗಿ ಎಲ್ಲಾ ಇಲಾಖೆಗಳಿಗೂ, ಸಂಸ್ಥೆಗಳಿಗೂ ಪತ್ರ ಬರೆದಿದ್ದೇನೆ. ಎಚ್‍ಎಎಎಲ್‍ನವರು 93 ಕೋಟಿ ರೂ. ತೆರಿಗೆ ಪಾವತಿಸಿದ್ದಾರೆ. ಮೊದಲು ಸರ್ಕಾರದಿಂದ ಬಾಕಿ ಇರುವ ತೆರಿಗೆ ವಸೂಲಿ ಮಾಡಲಾಗುವುದು. ನಂತರ ಖಾಸಗಿ ಆಸ್ತಿಗಳ ತೆರಿಗೆ ಸಂಗ್ರಹಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸ್ವಯಂ ಘೋಷಿತ ತೆರಿಗೆ ಪದ್ಧತಿಯಲ್ಲಿ ಜನ ಪ್ರಾಮಾಣಿಕವಾಗಿ ತೆರಿಗೆ ಪಾವತಿ ಮಾಡುತ್ತಿಲ್ಲ. ಪ್ಲಾನ್ ಅಪ್ರೂವಲ್ ಪಡೆದಿರುವ ನಿರ್ಮಾಣಕ್ಕೆ ಮಾತ್ರ ತೆರಿಗೆ ಸಂಗ್ರಹವಾಗುತ್ತಿದೆ. ಹೆಚ್ಚುವರಿ ನಿರ್ಮಾಣಗಳು ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿವೆ. ವಾಣಿಜ್ಯ ಕಟ್ಟಡಗಳಲ್ಲೂ ಜನವಸತಿ ತೆರಿಗೆಯನ್ನೇ ಸಂಗ್ರಹಿಸಲಾಗುತ್ತಿದೆ. ಹೀಗಾಗಿ ಪ್ರತಿ ಮನೆಯ ತೆರಿಗೆಯನ್ನು ಪುನರ್ ಪರಿಶೀಲನೆ ನಡೆಸಲು ನಿರ್ಧರಿಸಲಾಗಿದೆ ಎಂದರು.

SCROLL FOR NEXT