ರಾಜ್ಯ

ರಾಜ್ಯದಲ್ಲಿ ಡಾಪ್ಲರ್​ ರಾಡಾರ್ ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸಂಸದ ಈರಣ್ಣ ಕಡಾಡಿ ಮನವಿ

Manjula VN

ಬೆಳಗಾವಿ: ರಾಜ್ಯದಲ್ಲಿ ನಿಖರವಾದ ಹವಾಮಾನ ಮೇಲ್ವಿಚಾರಣೆ ಮತ್ತು ಮುನ್ಸೂಚನೆ ನೀಡುವ ಡಾಪ್ಲರ್ ಹವಾಮಾನ ರಾಡಾರ್ ವ್ಯವಸ್ಥೆಯ ಅಗತ್ಯವನ್ನು ಮನಗಂಡು ಬೆಳಗಾವಿಯ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಕೇಂದ್ರ ಸರ್ಕಾರಕ್ಕೆ ಮನವಿಯೊಂದನ್ನು ಸಲ್ಲಿಸಿದ್ದಾರೆ.

ಈರಣ್ಣ ಕಡಾಡಿ ಅವರು ಇತ್ತೀಚೆಗೆ ನವದೆಹಲಿಯಲ್ಲಿ ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಕರ್ನಾಟಕವು ಕೃಷಿ-ಸಮೃದ್ಧ ರಾಜ್ಯವಾಗಿದ್ದು, ವೈವಿಧ್ಯಮಯ ಭೌಗೋಳಿಕ ವಲಯಗಳನ್ನು ಹೊಂದಿದೆ. ಇದು ಅನಿರೀಕ್ಷಿತ ಹವಾಮಾನ ಮಾದರಿಗಳಿಗೆ ಒಳಗಾಗುತ್ತದೆ. ದೇಶದಲ್ಲಿ ಎರಡನೇ ಅತಿ ಹೆಚ್ಚು ಮಳೆ ಬೀಳುವ ತಾಣವಾಗಿದ್ದರೂ, ನಮ್ಮ ರಾಜ್ಯದಲ್ಲಿ ಪ್ರಸ್ತುತ ನಿಖರವಾದ ಹವಾಮಾನ ಮೇಲ್ವಿಚಾರಣೆ ಮತ್ತು ಮುನ್ಸೂಚನೆಯನ್ನು ಖಾತ್ರಿಪಡಿಸುವ ನಿರ್ಣಾಯಕ ಸಾಧನ (ಡಾಪ್ಲರ್ ಹವಾಮಾನ ರಾಡಾರ್) ಕೊರತೆಯಿದೆ. ಪ್ರಸ್ತುತ, ಕರ್ನಾಟಕದಾದ್ಯಂತ ಒಂದೇ ಒಂದು ಡಿಡಬ್ಲ್ಯೂಆರ್ ವ್ಯವಸ್ಥೆ ಇಲ್ಲ ಎಂದು ಕೇಂದ್ರ ಸಚಿವರಿಗೆ ತಿಳಿಸಿದ್ದಾರೆ.

ಕರ್ನಾಟಕಕ್ಕೆ ಹತ್ತಿರದ ಡಾಪ್ಲರ್ ಗೋವಾದಲ್ಲಿದೆ. ಸಕಾಲಿಕ ಹವಾಮಾನ ಮಾಹಿತಿಗಾಗಿ ನಾವು ನೆರೆಯ ರಾಜ್ಯದ ಮೇಲೆ ಹೆಚ್ಚು ಅವಲಂಬಿತರಾಗಿದ್ದೇವೆ. ಹೀಗಾಗಿ ಕುಂದಾಪುರ, ಬೆಳಗಾವಿ, ರಾಯಚೂರು ಮತ್ತು ಬೆಂಗಳೂರಿನಲ್ಲಿ ಡಾಪ್ಲರ್ ರೇಡಾರ್​ಗಳನ್ನು ಸ್ಥಾಪಸಿಬೇಕೆಂದು ಮನವಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿಯವರ ‘ಆತ್ಮ ನಿರ್ಭರ್ ಭಾರತ್’ ಉಪಕ್ರಮದ ಅಡಿಯಲ್ಲಿ ಭಾರತದಲ್ಲಿ ಡಾಪ್ಲರ್ ರೇಡಾರ್​​ಗಳನ್ನು ತಯಾರಿಸಲಾಗುತ್ತಿದೆ. ರಿಜಿಜು ಅವರು ಪತ್ರಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಈರಣ್ಣ ಕಡಾಡಿ ಹೇಳಿದರು.

SCROLL FOR NEXT