ರಾಜ್ಯ

ಲುಲು ಮಾಲ್‌ನಲ್ಲಿ ರಾಷ್ಟ್ರಧ್ವಜಕ್ಕೆ ಅಗೌರವ; ಸುಳ್ಳು ಸುದ್ದಿ ಪೋಸ್ಟ್ ಮಾಡಿದ ಬಿಜೆಪಿ ಕಾರ್ಯಕರ್ತೆ ವಿರುದ್ಧ ಪ್ರಕರಣ ದಾಖಲು

Ramyashree GN

ತುಮಕೂರು: ಕೇರಳದ ಕೊಚ್ಚಿಯಲ್ಲಿರುವ ಲುಲು ಮಾಲ್‌ನಲ್ಲಿ ಭಾರತದ ಧ್ವಜಕ್ಕೆ ಅಗೌರವ ತೋರಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಕ್ಕಾಗಿ ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಸಂಬಂಧ ಆಕೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ತುಮಕೂರು ನಗರದ ಜಯನಗರ ಪೊಲೀಸರು ಬಿಜೆಪಿ ಕಾರ್ಯಕರ್ತೆಯ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಐಪಿಸಿ ಸೆಕ್ಷನ್ 153 (ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತನಿಖಾಧಿಕಾರಿಯ ಮುಂದೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಸಹ ನೀಡಿದ್ದಾರೆ.

ಬಿಜೆಪಿ ಕಾರ್ಯಕರ್ತೆ ಶೇರ್ ಮಾಡಿರುವ ಪೋಸ್ಟ್ ನಕಲಿ ಮತ್ತು ಸುಳ್ಳು ಎಂದು ಸತ್ಯ ಪರಿಶೀಲನಾ ವಿಭಾಗ ಖಚಿತಪಡಿಸಿದ್ದು, ನಂತರ ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

'ಭಾರತದ ಬಾವುಟಕ್ಕಿಂತ ಬೇರೆ ಯಾವುದೇ ದೇಶದ ಬಾವುಟ ಎತ್ತರದಲ್ಲಿ ಇರಬಾರದು ಎನ್ನುವ ಸಾಮಾನ್ಯ ಜ್ಞಾನ ಇಲ್ಲವೇ ನಿಮ್ಮ ಮಾಲ್‍ನವರಿಗೆ? BoyCott Lulu Mall ಎಂಬ ಹ್ಯಾಷ್ ಟ್ಯಾಗ್ ಬಳಸಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿ ಶಕುಂತಲಾ ಟ್ವೀಟ್ ಮಾಡಿದ್ದರು.

ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಪ್ರತಿನಿಧಿಸುವ ವಿವಿಧ ದೇಶಗಳ ಧ್ವಜಗಳನ್ನು ಮಾಲ್‌ನಲ್ಲಿ ಪ್ರದರ್ಶಿಸಲಾಯಿತು. ಎಲ್ಲಾ ದೇಶಗಳ ಧ್ವಜಗಳನ್ನು ಸಮಾನ ಎತ್ತರದಲ್ಲಿ ಇರಿಸಲಾಗಿತ್ತು. ಆದರೆ, ಪಾಕಿಸ್ತಾನದ ಧ್ವಜದ ಕೆಳಗೆ ಭಾರತದ ಧ್ವಜ ಕಾಣಿಸುವ ರೀತಿಯಲ್ಲಿ ಫೋಟೊ ತೆಗೆಯಲಾಗಿದೆ.

ಈ ಫೋಟೊವು ಉದ್ದೇಶಪೂರ್ವಕವಾಗಿ ತೊಂದರೆ ಸೃಷ್ಟಿಸುವುದಾಗಿದೆ ಮತ್ತು ಎಡಿಟ್ ಮಾಡಿದ್ದಾಗಿದೆ. ಪೋಸ್ಟ್ ಮೂಲಕ ಜನರನ್ನು ಕೆರಳಿಸುವ ಯತ್ನ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಕುಂತಲಾ ಅವರು ಡಿಸಿಎಂ ಶಿವಕುಮಾರ್ ಮತ್ತು ಲುಲು ಮಾಲ್ ಅನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಕೊಚ್ಚಿಯ ಲುಲು ಮಾಲ್ ಚಿತ್ರವನ್ನು ಬಳಸಿಕೊಂಡು ಬೆಂಗಳೂರಿನಲ್ಲಿ ಜನರನ್ನು ಕೆರಳಿಸುವ ಪ್ರಯತ್ನ ನಡೆದಿದೆ ಎಂದು ತಿಳಿಸಿದ್ದಾರೆ.

ಇವರು ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿ ಗಲಾಟೆ ಸೃಷ್ಟಿಸಿದ್ದರು.

SCROLL FOR NEXT