ರಾಜ್ಯ

ಯುದ್ಧ ಪೀಡಿತ ಗಾಜಾದಲ್ಲಿ ಆಹಾರ, ನೀರಿಗೆ ಹಾಹಾಕಾರ, ನೆರವಿನ ಹಸ್ತ ಚಾಚಿದ ಭಾರತೀಯ ಮೂಲದ 'ಮದರ್ ತೆರೇಸಾ ಮಿಷನರೀಸ್ ಆಫ್ ಚಾರಿಟಿ'

Manjula VN

ಬೆಂಗಳೂರು: ಗಾಜಾ ಮೇಲಿನ ದಾಳಿಯನ್ನು ಇಸ್ರೇಲ್ ಮತ್ತಷ್ಟು ತೀವ್ರಗೊಳಿಸಿದ್ದು, ಅಲ್ಲಿ ಮಾನವೀಯತೆ ಕಣ್ಮರೆಯಾಗಿದೆ. ನೀರು, ಆಹಾರ, ಶೌಚಾಲಯ ವ್ಯವಸ್ಥೆಗಳಿಲ್ಲದೆ, ಮುಗ್ಧ ಮಕ್ಕಳು, ಹಿರಿಯ ನಾಗರೀಕರು, ಯುವಕರ ಸಹಾಯಕ್ಕಾಗಿ ಮೊರೆ ಇಡುತ್ತಿದ್ದಾರೆ.

ಸಂಕಷ್ಟದಲ್ಲಿರುವ ಈ ಜನರಿಗೆ ಭಾರತ ಮೂಲದ ಮದರ್ ತೆರೇಸಾ ಮಿಷನರೀಸ್ ಆಫ್ ಚಾರಿಟಿ (ಸ್ವಯಂ ಸೇವಾ ಸಂಘ) ಸಹಾಯದ ಹಸ್ತ ಚಾಚಿದ್ದು, ಭೀತಿಕರ ವಾತಾವರಣದ ನಡುವಲ್ಲೂ ಸಂಕಷ್ಟದಲ್ಲಿರುವ ಜನರ ಸೇವೆ ಮಾಡುತ್ತಿದೆ.

ಈ ಗುಂಪು ಗಾಜಾದಲ್ಲಿ ಕಳೆದ 50 ವರ್ಷಗಳಿಂದಲೂ ನೆಲೆಯೂರಿದ್ದು, ವಿಶೇಷ ಚೇತನ ಮಕ್ಕಳಿ ಆರೈಕೆ ಮಾಡುತ್ತಿದೆ. ಈ ಗುಂಪು ಯುದ್ಧವನ್ನು ನೋಡುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಯುದ್ಧಪೀಡಿತ ರಾಷ್ಟ್ರಗಳಲ್ಲಿ ಸಹಾಯಕ್ಕಾಗಿ ಮೊರೆ ಇಡುತ್ತಿದ್ದ ಸಾಕಷ್ಟು ಜನರಿಗೂ ನೆರವಿನ ಹಸ್ತ ಚಾಚಿದೆ. ಮದರ್ ತೆರೆಸಾ ಸಿಸ್ಟರ್ ಸಂಘವು 120 ದೇಶಗಳಲ್ಲಿ ತನ್ನ ಅಸ್ತಿತ್ವವನ್ನು ಹೊಂದಿದೆ. ಇವರು ಸಮುದಾಯ, ವರ್ಗ, ವರ್ಣ, ಪಂಥ ಲೆಕ್ಕಿಸದೆ ಬಡವರಿಗಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗಾಜಾದಲ್ಲಿ ಶೆಲ್ ದಾಳಿಗಳು ಮುಂದುವರೆದಿದ್ದು, ಸಾಕಷ್ಟು ಮಂದಿ ಕ್ರಿಶ್ಚಿಯನ್ನರು ಈ ಗುಂಪಿನ ಸಹಾಯ ಪಡೆದುಕೊಳ್ಳುತ್ತಿದ್ದಾರೆ.

ಓಲ್ಡ್ ಜೆರುಸಲೆಮ್‌ನಲ್ಲಿ ನೆಲೆಸಿರುವ ಬೆಂಗಳೂರಿನ ಫ್ರಾನ್ಸಿಸ್ಕನ್ ಫ್ರೈರ್ ಫಾದರ್ ಫ್ರಾನ್ಸಿಸ್ ಕ್ಸೇವಿಯರ್ ಅವರು ಮಾತನಾಡಿ, ಸಾಕಷ್ಟು ಮಂದಿ ವಯಸ್ಸಾದವರು ಹಾಸಿಗೆ ಹುಣ್ಣು (ಬೆಡ್ ಸೋರ್ಸ್) ನಿಂದ ಬಳಲುತ್ತಿದ್ದಾರೆ. ಇವರನ್ನು ಬಿಟ್ಟು ನಾವು ಹೊರಟು ಹೋದರೆ, ಇವರನ್ನು ಯಾರು ನೋಡಿಕೊಳ್ಳುತ್ತಾರೆ? ಇದೇ ರೀತಿಯ ಪರಿಸ್ಥಿತಿಯೂ ಮಕ್ಕಳದ್ದಾಗಿದೆ. ನಮ್ಮ ಆರೈಕೆ ಕೇಂದ್ರದಲ್ಲಿ 70 ವರ್ಷ ದಾಟಿದ ಹಿರಿಯ ನಾಗರೀಕರಿದ್ದಾರೆ, ಮಕ್ಕಳಿದ್ದಾರೆ. ನಾವು ಬಿಟ್ಟು ಹೋದರೆ, ಇವರು ಸಾವಂತೂ ಖಚಿತ ಎಂದು ಹೇಳಿದ್ದಾರೆ.

ಮೌಂಟ್‌ವರಿಯಲ್ಲಿ ಸಾಮೂಹಿಕ ಪ್ರಾರ್ಥನೆಯ ಬಳಿಕ ಇಂದು ಕೆಲವು ಮದರ್ ತೆರೇಸಾ ಗುಂಪಿಗೆ ಸೇರಿದ ಸಿಸ್ಟರ್ ಗಳು ನನ್ನ ಬಳಿಗೆ ಬಂದು ಸಹಾಯವನ್ನು ಕೋರಿದರು. ಗಾಜಾದ ಪರಿಸ್ಥಿತಿಗಳು ಬಹಳ ಕೆಟ್ಟದಾಗಿದೆ. ಫಾದರ್ ವಿನ್ಸೆಂಟ್ ನಿಂದ ಸಹಾಯವನ್ನು ನೀಡಲಾಗುತ್ತಿದೆ. ಆದರೆ, ಎಲ್ಲಾ ಸೇವೆಗಳನ್ನು ನಿರ್ಬಂಧಿಸಲಾಗಿರುವುದರಿಂದ ಸೌಲಭ್ಯಗಳು ತಲುತ್ತಿಲ್ಲ. ಹಣ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ ಎಂದು ಸಿಸ್ಟರ್ಸ್ ಹೇಳುತ್ತಿದ್ದಾರೆಂದು ಹೇಳಿದ್ದಾರೆ.

ಓಲ್ಡ್ ಜೆರುಸೆಲಂ ಮೇಲಿನ ದಾಳಿ ಕುರಿತ ಪ್ರಶ್ನೆಗೆ ಉತ್ತರಿಸಿ, ಆರಂಭದಲ್ಲಿ ನಮ್ಮ ಮೇಲೂ ಎರಡು ರಾಕೆಟ್ ಗಳನ್ನು ಹಾರಿಸಲಾಗಿತ್ತು. ಇಸ್ರೇಲ್ ವಾಯು ರಕ್ಷಣಾ ವ್ಯವಸ್ಥೆಗಳು ಅದನ್ನು ಗಾಳಿಯಲ್ಲಿ ಸ್ಫೋಟಿಸಿ, ಅಪಾಯಗಳು ಸಂಭವಿಸದಂತೆ ತಡೆದವು. ಅದೃಷ್ಟವಶಾತ್ ನಾವು ಸುರಕ್ಷಿತವಾಗಿದ್ದೇವೆ. ಇಲ್ಲಿ ನಮ್ಮ ವಿರುದ್ಧ ಯಾವುದೇ ದಾಳಿ ನಡೆದಿಲ್ಲ ಎಂದು ತಿಳಿಸಿದ್ದಾರೆ.

SCROLL FOR NEXT