ರಾಜ್ಯ

ಅಂಗಡಿಗಳಲ್ಲಿ ಕೇಸರಿ ಧ್ವಜ ಕಟ್ಟಿದ ಪ್ರಕರಣ: ವಿಎಚ್‌ಪಿ ಮುಖಂಡ ಶರಣ್ ಪಂಪ್‌ವೆಲ್ ವಿರುದ್ಧ ಪ್ರಕರಣ ದಾಖಲು

Ramyashree GN

ಮಂಗಳೂರು: ಇಲ್ಲಿನ ಶ್ರೀ ಮಂಗಳಾದೇವಿ ದೇವಸ್ಥಾನದ ಬಳಿ ಕೋಮುಸಾಮರಸ್ಯಕ್ಕೆ ಧಕ್ಕೆ ತಂದ ಆರೋಪದ ಮೇಲೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮುಖಂಡ ಶರಣ್ ಪಂಪ್‌ವೆಲ್ ಮತ್ತು ಆತನ ಸಹಚರರ ವಿರುದ್ಧ ಮಂಗಳೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಮಂಗಳವಾರ ದಸರಾ ಮಹೋತ್ಸವದ ವೇಳೆ ಪಂಪ್‌ವೆಲ್, ಸಹಚರರ ಗುಂಪು ದೇವಸ್ಥಾನದ ಸುತ್ತಮುತ್ತಲಿನ ಹಿಂದೂ ಸಮುದಾಯದವರ ಮಾಲೀಕತ್ವದ ಅಂಗಡಿಗಳಲ್ಲಿ ಕೇಸರಿ ಧ್ವಜವನ್ನು ಇರಿಸಿದ್ದರು.

ತಮ್ಮ ಅಗತ್ಯಗಳಿಗಾಗಿ ಸಹ ಹಿಂದೂಗಳ ಮಾಲೀಕತ್ವದ ಮತ್ತು ನಿರ್ವಹಿಸುವ ಅಂಗಡಿಗಳನ್ನು ಮಾತ್ರ ಬೆಂಬಲಿಸುವಂತೆ ಹಿಂದೂ ಸಮುದಾಯವನ್ನು ಒತ್ತಾಯಿಸುವ ಪತ್ರಿಕಾ ಹೇಳಿಕೆಯನ್ನೂ ಬಿಡುಗಡೆ ಮಾಡಿದ್ದರು. ಈ ಕ್ರಮಗಳು ಮತ್ತು ಹೇಳಿಕೆಗಳು ಧಾರ್ಮಿಕ ದ್ವೇಷವನ್ನು ಪ್ರಚೋದಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಪೊಲೀಸರು ಹೇಳಿದ್ದಾರೆ.

ಈ ಸಂಬಂಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋಮು ಸೌಹಾರ್ದತೆ ಕದಡುವ ಮತ್ತು ಧಾರ್ಮಿಕ ಆಧಾರದ ಮೇಲೆ ವಿಭಜಿಸುವ ನಡವಳಿಕೆಯನ್ನು ಉತ್ತೇಜಿಸುವುದು ಸೇರಿದಂತೆ ಇತರೆ ಆರೋಪಗಳನ್ನು ಹೊರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರು ಬುಧವಾರ ಮಾತನಾಡಿ, ನಗರದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವ ಪೊಲೀಸ್ ಇಲಾಖೆಯ ಬದ್ಧತೆಯನ್ನು ಒತ್ತಿ ಹೇಳಿದರು.

ಈಮಧ್ಯೆ, ದಕ್ಷಿಣ ಕನ್ನಡದ ಜಾತ್ಯತೀತ ಪಕ್ಷಗಳು ಮತ್ತು ಸಂಘಟನೆಗಳ ಜಂಟಿ ವೇದಿಕೆಯು ವಿಎಚ್‌ಪಿ ನೀಡಿರುವ ಕರೆಯನ್ನು ಖಂಡಿಸಿದೆ ಮತ್ತು ಬಲಪಂಥೀಯ ಸಂಘಟನೆಯು ಇತರ ಧರ್ಮಗಳ ವ್ಯಾಪಾರಿಗಳನ್ನು ಬಹಿಷ್ಕರಿಸುವ ಮೂಲಕ ಜನರನ್ನು ವಿಭಜಿಸುತ್ತಿದೆ ಎಂದು ದೂರಿದೆ.

ವೇದಿಕೆಯ ಪ್ರಧಾನ ಕಾರ್ಯದರ್ಶಿ ಹಾಗೂ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಶತಮಾನಗಳಿಂದ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಆಚರಣೆಯಲ್ಲಿ ಎಲ್ಲಾ ಧರ್ಮದ ಜನರು ಸೇರುತ್ತಿದ್ದಾರೆ ಎಂದರು.

SCROLL FOR NEXT