ರಾಜ್ಯ

ಪ್ರತಿಭಟನೆಗೆ ಫ್ರೀಡಂ ಪಾರ್ಕ್ ಸೀಮಿತ: ಸಂಚಾರ ದಟ್ಟಣೆ, ಪ್ರತಿಭಟನಾಕಾರರ ಕೂಗಿನಿಂದ ವಿದ್ಯಾರ್ಥಿಗಳಿಗೆ ಕಿರಿಕಿರಿ!

Manjula VN

ಬೆಂಗಳೂರು: ಪ್ರತಿಭಟನೆಗಳಿಗೆ ರಾಜ್ಯ ಸರ್ಕಾರ ಫ್ರೀಡಂ ಪಾರ್ಕ್'ನ್ನು ಸೀಮಿತಗೊಳಿಸಿದ್ದು, ಪ್ರತಿಭಟನೆಗಳ ಕೂಗು ಹಾಗೂ ಸಂಚಾರ ದಟ್ಟಣೆಯಿಂದಾಗಿ ಇಲ್ಲಿನ ಸುತ್ತಮುತ್ತಲಿರುವ ಶಿಕ್ಷಣ ಸಂಸ್ಥೆ ಹಾಗೂ ಸರ್ಕಾರಿ ಕಚೇರಿಗಳಿಗೆ ಕಿರಿಕಿರಿಯುಂಟಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕಾಲೇಜು ಆರಂಭಗೊಳ್ಳುವ ಸಮಯದಲ್ಲಿ ಪ್ರತೀನಿತ್ಯ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆಗಳು ನಡೆಯುತ್ತಲೇ ಇರುತ್ತವೆ. ಪ್ರತಿಭಟನೆಯ ಕೂಗುಗಳಿಂದಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಒತ್ತಡ ಅನುಭವಿಸುವಂತಾಗಿದೆ. ಪೊಲೀಸರಿಗೆ ಮೌಖಿಕವಾಗಿ ದೂರು ನೀಡಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಉಪಕುಲಪತಿ ಎಲ್ ಗೋಮತಿ ದೇವಿ ಅವರು ಹೇಳಿದ್ದಾರೆ.

ಹೋಮ್ ಸೈನ್ಸ್ ಕಾಲೇಜಿನ ಪ್ರಾಂಶುಪಾಲೆ ಉಷಾದೇವಿ ಸಿ ಮಾತನಾಡಿ, ಪ್ರತಿಭಟನಾಕಾರರು ಅನುಮತಿಯಿಲ್ಲದೆ ಕಾಲೇಜು ಶೌಚಾಲಯಗಳನ್ನು ಬಳಸುತ್ತಾರೆ, ಕಾಲೇಜಿಗೆ ಸೇರಿದ ಪ್ರದೇಶದಲ್ಲಿ ಖಾಸಗಿ ವಾಹನಗಳ ನಿಲುಗಡೆ ಮಾಡುತ್ತಿದ್ದಾರೆ. ಕ್ಯಾಂಪಸ್‌ನ ಹೊರಗೆ ಕಸವನ್ನು ಬಿಸಾಡುತ್ತಾರೆ. ಈ ಬಗ್ಗೆ ಹಲವು ಬಾರಿ ದೂರು ದಾಖಲಿಸಿದ್ದೇವೆ. ಆದರೆ, ಪ್ರತೀನಿತ್ಯ ಈ ಸಮಸ್ಯೆಗಳು ಸಾಮಾನ್ಯವಾಗಿ ಹೋಗಿದೆ. ಮೂಲಭೂತ ಸೌಕರ್ಯಗಳಿಲ್ಲದ ಕಾರಣ ಕೆಲವರು ಕಾಲೇಜು ಗೋಡೆಗಳ ಮೇಲೆಯೇ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದು ದೊಡ್ಡ ನೈರ್ಮಲ್ಯ ಸಮಸ್ಯೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬೋಧನೆ ಸಮಯದಲ್ಲಿ ಗಾಳಿ ಇರಬೇಕು. ಹೀಗಾಗಿ ಕಿಟಿಕಿ ಹಾಗೂ ಬಾಗಿಲು ಮುಚ್ಚಲು ಸಾಧ್ಯವಾಗುವುದಿಲ್ಲ. ಪ್ರತಿಭಟನೆ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ತೀವ್ರ ಸಂಚಾರ ದಟ್ಟಣೆ ಎದುರಾಗುತ್ತದೆ. ಕಾಲೇಜು ಆರಂಭವಾಗುವ ಸಮಯಲ್ಲಿ ಈ ಸಮಸ್ಯೆಗಳು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಕಿರಿಕಿರಿಯುಂಟು ಮಾಡುತ್ತಿದೆ ಎಂದು ಹೇಳಿದ್ದಾರೆ.

ಉನ್ನತ ಶಿಕ್ಷಣ ಸಚಿವ ಸುಧಾಕರ್ ಅವರು ಪ್ರತಿಕ್ರಿಯೆ ನೀಡಿ, ಎತ್ತರದ ಗೋಡೆ ನಿರ್ಮಿಸುವುದು ಸಮಸ್ಯೆಗಿರುವ ಒಂದು ಪರಿಹಾರವಾಗಿದೆ. ಈ ಬಗ್ಗೆ ಪೊಲೀಸ್ ಆಯುಕ್ತರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಇದರ ಜವಾಬ್ದಾರಿ ಸರ್ಕಾರದ ಮೇಲಿದೆ. ಪ್ರತಿಭಟನೆ ನಡೆಸುವುದು ನಮ್ಮ ಮೂಲಭೂತ ಹಕ್ಕು ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

ಸಣ್ಣಪುಟ್ಟ ಪ್ರತಿಭಟನೆಗಳನ್ನು ನಗರದ ಪುರಭವನ, ಮೈಸೂರು ಬ್ಯಾಂಕ್ ವೃತ್ತ, ಸಿಲ್ವರ್ ಜ್ಯೂಬಿಲಿ ಪಾರ್ಕ್ ಹಾಗೂ ಕಬ್ಬನ್ ಪಾರ್ಕ್ ಒಳಗೆ ನಡೆಸಲು ಅವಕಾಶ ನೀಡಬಹುದು ಎಂದು ಮತ್ತೊಬ್ಬ ಕಾರ್ಯಕರ್ತೆ ವಿಮಲಾ ಕೆ.ಎಸ್ ಅವರು ಹೇಳಿದ್ದಾರೆ.

ಸರ್ಕಾರದ ಗಮನ ಸೆಳೆಯುವುದು ಈ ಪ್ರತಿಭಟನೆಗಳ ಉದ್ದೇಶವಾಗಿದೆ. ಪ್ರತಿಭಟನಾಕಾರರನ್ನು ಮೂಲೆಗುಂಪು ಮಾಡುವುದು ಸರಿಯಲ್ಲ ಎಂದು ಮಹಿಳಾ ಹಕ್ಕುಗಳ ಕಾರ್ಯಕರ್ತೆ ಬೃಂದಾ ಅಡಿಗೆ ಅವರು ಹೇಳಿದ್ದಾರೆ.

SCROLL FOR NEXT