ರಾಜ್ಯ

ಚಿಕ್ಕಬಳ್ಳಾಪುರ: ನಾಟಿ ಔಷಧಿ ಸೇವಿಸಿದ್ದ 7 ವರ್ಷದ ಬಾಲಕ ಸಾವು; ವೈದ್ಯನ ವಿರುದ್ಧ ದೂರು ದಾಖಲು

Shilpa D

ಚಿಕ್ಕಬಳ್ಳಾಪುರ: ನಾಟಿ ಔಷಧಿ ಸೇವಿಸಿ ಬಾಲಕನೊಬ್ಬ ಮೃತಪಟ್ಟ ಘಟನೆ ತಾಲೂಕಿನ ನಲ್ಲಗುಟ್ಟಪಾಳ್ಯ ಗ್ರಾಮದಲ್ಲಿ ನಡೆದಿದೆ. ಅಕ್ಟೋಬರ್ 13 ರಂದು ಘಟನೆ ನಡೆದಿದ್ದರೂ ಇತ್ತೀಚೆಗೆ ಪ್ರಕರಣ ಬೆಳಕಿಗೆ ಬಂದಿದೆ.

ನಲ್ಲಗುಟ್ಟ ಪಾಳ್ಯದ 7 ವರ್ಷದ ಬಾಲಕ ವೇದೇಶ್  ಕಿವಿಯಲ್ಲಿ ಗಾಯಗಳಾಗಿದ್ದವು, ಹೀಗಾಗಿ ಆತನ ಪೋಷಕರಾದ ಶ್ರೀನಿವಾಸ್ ಮತ್ತು ಶಶಿಕಲಾ ತಮ್ಮ ಗ್ರಾಮದಿಂದ ಸುಮಾರು 15 ಕಿಮೀ ದೂರದಲ್ಲಿರುವ ಬೋಯಿನೇಹಳ್ಳಿಯಲ್ಲಿರುವ ಸಾಂಪ್ರಾದಾಯಿಕ ವೈದ್ಯರ ಬಳಿ ಕರೆದೊಯ್ದಿದ್ದರು ಎಂದು  ಚಿಕ್ಕ ಬಳ್ಳಾಪುರ ಎಸ್ ಪಿ ನಾಗೇಶ್ ತಿಳಿಸಿದ್ದಾರೆ.

ನಾಟಿ ವೈದ್ಯ ಔಷಧಿ ನೀಡಿದರೂ ಬಾಲಕನ ಸ್ಥಿತಿ ಸುಧಾರಿಸಲಿಲ್ಲ, ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು, ಅಕ್ಟೋಬರ್ 13 ರಂದು ಬೆಳಗ್ಗೆ 10.30ರ ಸುಮಾರಿಗೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು, ಪರೀಕ್ಷಿಸಿದ ವೈದ್ಯರು ಆತ ಸಾವನ್ನಪ್ಪಿರುವುದಾಗಿ ಘೋಷಿಸಿದ್ದರು ಎಂದು ಎಸ್ ಪಿ ಮಾಹಿತಿ ನೀಡಿದ್ದಾರೆ.

ಪೊಲೀಸರಿಗೆ ಮಾಹಿತಿ ನೀಡದ ಕಾರಣ ಅದೇ ದಿನ ಮಧ್ಯಾಹ್ನ 3 ಗಂಟೆ ಸುಮಾರಿಗೆ ಶವ ಸಂಸ್ಕಾರ ಮಾಡಲಾಗಿತ್ತು.. ಅನುಮಾನಗೊಂಡ ದಲಿತ ಮುಖಂಡರೊಬ್ಬರು ಸರ್ಕಾರಿ ಆಸ್ಪತ್ರೆಗೆ ಧಾವಿಸಿ ಮರಣ ಪ್ರಮಾಣ ಪತ್ರ ಪಡೆದರು.

ನಂತರ ಸಂಜೆ 4.30ರ ಸುಮಾರಿಗೆ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ. ಗ್ರಾಮಾಂತರ ಸಬ್ ಇನ್ಸ್ ಪೆಕ್ಟರ್ ಪ್ರದೀಪ್ ಪೂಜಾರಿ ಅವರು ಕೂಡಲೇ ಆಸ್ಪತ್ರೆಗೆ ತೆರಳಿ ಶವ ಪತ್ತೆಯಾಗದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದರು, ಆದರೆ ಬಾಲಕನನ್ನು ಈಗಾಗಲೇ ಸಮಾಧಿ ಮಾಡಲಾಗಿತ್ತ ಎಂದು ಎಸ್ಪಿ ತಿಳಿಸಿದ್ದಾರೆ.

ಸಮೀಪದಲ್ಲೇ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರೂ ಅಲ್ಲಿ ಚಿಕಿತ್ಸೆ ಪಡೆಯದೇ ಕೂಲಿ ಕಾರ್ಮಿಕ ದಂಪತಿಯಾದ ಶ್ರೀನಿವಾಸ್ ಮತ್ತು ಶಶಿಕಲಾ ಗ್ರಾಮಸ್ಥರ ಸಲಹೆ ಮೇರೆಗೆ ನಾಟಿ ಔಷಧವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಪೋಷಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಇದೀಗ ಪೊಲೀಸರು ಶವಪರೀಕ್ಷೆ ವರದಿಗಾಗಿ ಕಾಯುತ್ತಿದ್ದಾರೆ.

SCROLL FOR NEXT