ರಾಜ್ಯ

ಮೈಸೂರು ದಸರಾ: ಜಂಬೂ ಸವಾರಿ ಮೆರವಣಿಗೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಚಾಲನೆ

Sumana Upadhyaya

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ಇಂದು ಮಂಗಳವಾರ ಸಂಜೆ 4.40ರಿಂದ 5 ಗಂಟೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಅಂಬಾರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು. ಸುಮಾರು 5ರಿಂದ 7 ಕಿಲೋ ಮೀಟರ್ ವರೆಗೆ ಜಂಬೂ ಸವಾರಿ ಸಾಗಲಿದೆ. 

ಸಿಎಂ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ಸತತ 4ನೇ ಬಾರಿಗೆ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ‘ಅಭಿಮನ್ಯು’ ಹೊತ್ತು ಸಾಗುತ್ತಿದ್ದು, ಅಭಿಮನ್ಯುಗೆ ಕುಮ್ಕಿ ಆನೆಗಳಾದ ಲಕ್ಷ್ಮೀ, ವಿಜಯಾ ಸಾಥ್ ನೀಡುತ್ತಿವೆ. ಅರಮನೆಯಿಂದ ಬನ್ನಿಮಂಟಪದವರೆಗೆ ಈ ಜಂಬೂಸವಾರಿ ಸಾಗಲಿದೆ. ಈ ವೇಳೆ ಜಂಬೂಸವಾರಿಯಲ್ಲಿ 49 ಸ್ತಬ್ಧಚಿತ್ರಗಳು, ವಿವಿಧ ಕಲಾತಂಡಗಳು ಭಾಗಿಯಾಗಿವೆ.

ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಅರಮನೆ ವೇದಿಕೆಯತ್ತ ಬಂದು ನಿಂತ ಬಳಿಕ ಮೊದಲು ರಾಷ್ಟ್ರಗೀತೆಯನ್ನು ಮೊಳಗಿಸಲಾಯಿತು. ತಕ್ಷಣವೇ 21 ಕುಶಾಲತೋಪುಗಳನ್ನು ಸಿಡಿಸುವ ಮೂಲಕ ಗೌರವವನ್ನು ಅರ್ಪಿಸಲಾಯಿತು.ಇದಾದ ಬಳಿಕ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಅರಮನೆ ಅಂಗಳದಿಂದ ಬನ್ನಿಮಂಟಪದತ್ತ ಪ್ರಯಾಣ ಬೆಳೆಸಿದ. ಈ ವೇಳೆ ಲಕ್ಷ್ಮಿ ಹಾಗೂ ವಿಜಯ ಆನೆಗಳು ಕುಮ್ಕಿ ಆನೆಗಳಾಗಿ ಅಂಬಾರಿಯ ಎಡ-ಬಲದಲ್ಲಿ ಸಾಗಿದರೆ, ಗಜಪಡೆಯ ಹಿರಿಯಣ್ಣ, ಮಾಜಿ ಕ್ಯಾಪ್ಟನ್ ಅರ್ಜುನ ನಿಶಾನೆ ಆನೆಯಾಗಿ, ಧನಂಜಯ ನೌಫತ್ ಆನೆಯಾಗಿ ಮತ್ತು ಇನ್ನುಳಿದವು ಸಾಲಾನೆಯಾಗಿ ಪಾಲ್ಗೊಂಡು ಗಮನ ಸೆಳೆದವು. ಇನ್ನು ಅಂಬಾರಿ ಜತೆ 200 ಮಂದಿ ರಾಜ ಪರಿವಾರದ ಧಿರಿಸಿನೊಂದಿಗೆ ಸಾಗಿದ್ದು ಮತ್ತೊಂದು ಆಕರ್ಷಣೆಯಾಗಿತ್ತು.

ಸಿಎಂ ಸಿದ್ದರಾಮಯ್ಯಗೆ ಇದು ಆರನೇ ಅವಕಾಶ: ಮೈಸೂರು ಜಿಲ್ಲೆಯವರೇ ಆಗಿರುವ ಸಿಎಂ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಆರನೇ ಬಾರಿ ಜಂಬೂಸವಾರಿಗೆ ಚಾಲನೆ ನೀಡುವ ಅವಕಾಶವನ್ನು ಪಡೆದಿದ್ದಾರೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಡಾ. ಎಚ್‌.ಸಿ. ಮಹದೇವಪ್ಪ ಅವರಿಗೆ ಇದು 3ನೇ ದಸರಾ ಸಂಭ್ರಮ ಆಗಿದೆ.

ಮೀನ ಲಗ್ನದಲ್ಲಿ ಅಂಬಾರಿಗೆ ಪುಷ್ಪಾರ್ಚನೆ: ಸಂಜೆ 4.40ರಿಂದ 5 ಗಂಟೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಅಂಬಾರಿಗೆ ಪುಷ್ಪಾರ್ಚನೆ ಸಲ್ಲಿಸಲಿದ್ದಾರೆ. ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಸಿ. ಮಹದೇವಪ್ಪ, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಭಾಗಿಯಾಗಿದ್ದಾರೆ.

ಅಂಬಾರಿಗೆ ಪುಷ್ಪಾರ್ಚನೆ ನೆರವೇರಿಸಲಾಗುತ್ತಿದ್ದಂತೆ ಅರಮನೆ ಮಾರ್ಗವಾಗಿ ಜಂಬೂ ಸವಾರಿ ಹೊರಟಿದೆ. ಗಜಪಡೆಗಳ ಹಿಂದೆ 49 ಸ್ತಬ್ಧ ಚಿತ್ರಗಳು, 50 ಕಲಾತಂಡಗಳು ಸೇರಿ 150 ಪ್ರಾಕಾರಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿವೆ.

SCROLL FOR NEXT