ರಾಜ್ಯ

Mysuru Dasara 2023: ವಿಶ್ವವಿಖ್ಯಾತ ಜಂಬೂಸವಾರಿ; ಸಕಲ ಸಿದ್ಧತೆ ಪೂರ್ಣ, 4ನೇ ಬಾರಿ ಅಂಬಾರಿ ಹೊರಲಿರುವ ಅಭಿಮನ್ಯು

Srinivasamurthy VN

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಸಕಲ ಸಿದ್ಧತೆ ಪೂರ್ಣಸಿದ್ಧತೆ ಪೂರ್ಣಗೊಂಡಿದೆ.

ಸತತ ನಾಲ್ಕನೇ ಬಾರಿಗೆ ಅಭಿಮನ್ಯು ಆನೆಯು ತಾಯಿ ಚಾಮುಂಡೇಶ್ವರಿ ವಿಗ್ರಹ ಇರುವ ಚಿನ್ನದ ಅಂಬಾರಿಯನ್ನು ಹೊರುತ್ತಿದ್ದು, ಸತತ ಮೂರು ಬಾರಿ 750 ಕೆ.ಜಿ. ಚಿನ್ನದ ಅಂಬಾರಿ ಹೊತ್ತು ಹ್ಯಾಟ್ರಿಕ್ ಸಾಧಿಸಿರುವ ಅಭಿಮನ್ಯು ಆನೆ ಈಗ 4ನೇ ಬಾರಿಗೆ ಅಂಬಾರಿ ಹೊರಲು ಸರ್ವ ಸನ್ನದ್ಧವಾಗಿದೆ.  ಈ ಬಾರಿ ಅಭಿಮನ್ಯು ಆನೆಯೊಂದಿಗೆ ಒಟ್ಟು 14 ಆನೆಗಳು ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕಲಿವೆ. ಅರಮನೆಯ ಬಲರಾಮ ದ್ವಾರದಲ್ಲಿ ಮಧ್ಯಾಹ್ನ 1.46ರಿಂದ 2.08ರೊಳಗೆ ನಂದಿಧ್ವಜಕ್ಕೆ ಪೂಜೆ ನೆರವೇರಲಿದೆ. ಬಳಿಕ ಸಂಜೆ 4.40ರಿಂದ 5 ಗಂಟೆ ನಡುವೆ ಸಲ್ಲುವ ಶುಭ ಲಗ್ನದಲ್ಲಿ ಜಂಬೂ ಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.

ಜಂಬೂಸವಾರಿಗೆ ಚಾಲನೆ ನೀಡುವ ಮುನ್ನ ಸಿಎಂ ಸಿದ್ದರಾಮಯ್ಯ ಮಧ್ಯಾಹ್ನ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಸುತ್ತೂರು ಶ್ರೀಗಳಿಂದ ಸಿದ್ದರಾಮಯ್ಯ ಆಶೀರ್ವಾದ ಪಡೆಯಲಿದ್ದಾರೆ. ಬಳಿಕ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಿರುವ ಚಾಮುಂಡೇಶ್ವರಿ ಮಹಿಷಾಸುರ ಮರ್ಧಿನಿ ಮೂರ್ತಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. 

ಜಂಬೂ ಸವಾರಿಯಲ್ಲಿ 14 ಆನೆಗಳೊಂದಿಗೆ 31 ಜಿಲ್ಲೆಗಳ ಒಟ್ಟು 47 ಸ್ಥಬ್ಧ ಚಿತ್ರ ಮೆರವಣಿಗೆ ಕೂಡ ನಡೆಯಲಿದೆ. ಇದಲ್ಲದೆ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗಿಯಾಗಲಿವೆ. ಹೀಗಾಗಲೇ ಲಕ್ಷಾಂತರ ಜನ ಅರಮನೆ ನಗರಿಗೆ ಬಂದಿಳಿದಿದ್ದು ದಸರಾ ವೀಕ್ಷಣೆಗೆ ಕಾತುರದಿಂದ ಕಾಯುತ್ತಿದ್ದಾರೆ.

ಅರಮನೆಯಲ್ಲಿ ಬೆಳಗ್ಗೆಯಿಂದಲೇ ಪೂಜಾ ಕೈಂಕರ್ಯ
ವಿಜಯದಶಮಿ ಹಿನ್ನೆಲೆ ಬೆಳಗ್ಗೆಯಿಂದ ಅರಮನೆಯಲ್ಲಿ ಪೂಜಾ ಕೈಂಕರ್ಯಗಳು ಆರಂಭವಾಗಲಿದೆ. 9.45ಕ್ಕೆ ಆನೆ ಬಾಗಿಲಿಗೆ ಪಟ್ಟದ ಆನೆ ಪಟ್ಟದ ಕುದುರೆ ಪಟ್ಟದ ಆನೆ ಮತ್ತು ಪಟ್ಟದ ಹಸು ಆಗಮನವಾಗುತ್ತದೆ. ಕಲ್ಯಾಣಮಂಟಪದಲ್ಲಿ ಖಾಸ ಆಯುಧಗಳಿಗೆ ಪೂಜೆ ನಂತರ. ಬೆಳಗ್ಗೆ 11 ರಿಂದ 11.40 ವಿಜಯದಶಮಿ ಮೆರವಣಿಗೆ ನಡೆಯಲಿದೆ. ಅರಮನೆ ಆನೆ ಬಾಗಿಲಿನಿಂದ ಭುವನೇಶ್ವರಿ ದೇಗುಲದವರೆಗೂ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮೆರವಣಿಗೆಯಲ್ಲಿ ಸಾಗಲಿದ್ದಾರೆ. ನಂತರ ದೇಗುಲದ ಬನ್ನಿ ಮರಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಸುಮಾರು ಒಂದು ಗಂಟೆ ಪೂಜೆಯ ನಂತರ ಮೆರವಣಿಗೆ ಮೂಲಕ ಅರಮನೆಗೆ ವಾಪಸ್ಸಾಗಲಿದ್ದಾರೆ. ಈ‌ ಮೂಲಕ ಮೈಸೂರು ಅರಮನೆಯ ದಸರಾ ಕಾರ್ಯಕ್ರಮಗಳಗೆ ತೆರೆ ಬೀಳಲಿದೆ.
 

SCROLL FOR NEXT