ರಾಜ್ಯ

ಕಾನೂನಿಗೆ ಮೀರಿದವರು ಯಾರೂ ಇಲ್ಲ, ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ: ಈಶ್ವರ್ ಖಂಡ್ರೆ

Sumana Upadhyaya

ಬೆಂಗಳೂರು: ವನ್ಯಜೀವಿ ಸಂರಕ್ಷಣೆ ಕಾಯ್ದೆ 1972ರಲ್ಲಿ ಜಾರಿಗೆ ಬಂದಿದೆ. ಅದಾದ ನಂತರ 80ರ ದಶಕದಲ್ಲಿ,2002ರಲ್ಲಿ, 2022ರಲ್ಲಿ ತಿದ್ದುಪಡಿಯಾಯಿತು. ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿಯಲ್ಲಿ ವನ್ಯಪ್ರಾಣಿಗಳ ಅಂದರೆ ಹುಲಿ ಚರ್ಮ, ಆನೆಯ ದಂತ, ಹುಲಿ ಉಗುರು, ಚಿಂಕೆ ಚರ್ಮ, ಕೊಂಬು ಇತ್ಯಾದಿಗಳನ್ನು ಯಾವುದನ್ನೂ ಉಪಯೋಗ ಮಾಡಲು, ಸಂಗ್ರಹ ಮಾಡಲು, ಸಾಗಾಟ ಮಾಡಲು, ಸ್ವಂತಕ್ಕೆ ಇಟ್ಟುಕೊಳ್ಳಲು ಅವಕಾಶವಿಲ್ಲ. ಯಾರಾದರೂ ಆ ರೀತಿ ಮಾಡಿದ್ದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹುಲಿಯ ಉಗುರನ್ನು ತಮ್ಮ ಕೊರಳಲ್ಲಿ ಹಾಕಿಕೊಂಡಿದ್ದಾರೆ ಎಂದು ದೂರುಗಳು ಬರುತ್ತಿರುವ ಬಗ್ಗೆ, ಹುಲಿ ಚರ್ಮ ಉಪಯೋಗ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಅರಣ್ಯ ಇಲಾಖೆ ತನಿಖೆ ನಡೆಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಿದೆ ಎಂದರು.

ಈ ನೆಲದ ಕಾನೂನು ಎಲ್ಲರಿಗೂ ಒಂದೇ ರೀತಿ ಅನ್ವಯವಾಗುತ್ತದೆ. ಯಾರೂ ಕಾನೂನಿಗೆ ಮೀರಿದವರು ಇಲ್ಲ. ಎಷ್ಟೇ ಪ್ರಭಾವವಿದ್ದರೂ ಸರ್ಕಾರ ಕಾನೂನು ಕ್ರಮ ಜರುಗಿಸುತ್ತದೆ ಎಂದರು. 

ನಮಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ, ಯಾವ್ಯಾವ ಭಾಗದಲ್ಲಿ ಯಾರು ದೂರುಗಳನ್ನು ನೀಡುತ್ತಾರೋ ಅವರ ದೂರುಗಳನ್ನು ಪರಿಶೀಲನೆ ಮಾಡಲಾಗುತ್ತದೆ.ಹುಲಿ ಉಗುರು ಕೊರಳಲ್ಲಿ ಹಾಕಿಕೊಂಡಿರುವ ಬಗ್ಗೆ ದೂರು ಬರುತ್ತಿವೆ. ಯಾವುದೇ ದೂರು ಬಂದರೂ ತನಿಖೆ ನಡೆಸಿ ಇಲಾಖೆ ಕ್ರಮ ಕೈಗೊಳ್ಳುತ್ತದೆ. ನಟ ದರ್ಶನ್, ಜಗ್ಗೇಶ್ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಆದರೆ ಯಾರೇ ದೂರು ನೀಡಿದರೂ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಹುಲಿ ಉಗುರಿನ ಲಾಕೆಟ್​ ಧರಿಸಿದ ಫೋಟೋಗಳು ವೈರಲ್ ಆಗಿ ಕಾನೂನು ಕ್ರಮದ ಬಗ್ಗೆ ಚರ್ಚೆಯಾಗುತ್ತಿರುವುದರ ಮಧ್ಯೆ, ಡಿಸಿಎಫ್​ಓ ರವೀಂದ್ರ ಅವರು ಪ್ರತಿಕ್ರಿಯಿಸಿ, ಸದ್ಯಕ್ಕೆ ನಮಗೆ ಯಾವ ದೂರು ಬಂದಿಲ್ಲ. ಬೇರೆಯವರು ಹಾಕಿದ್ದರೂ ಕಾನೂನು ಅಡಿಯಲ್ಲಿ ಅಪರಾಧ ಆಗುತ್ತದೆ. ದೂರು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಅಂತಹ ಪ್ರಕರಣ ನಮ್ಮಲ್ಲಿ ರಿಜಿಸ್ಟರ್ ಆದರೆ ಅದಕ್ಕೆ ಎನು ಬೇಕೋ ಅದನ್ನು ಕ್ರಮ ತೆಗೆದುಕೊಳ್ಳಲು ಅಧಿಕಾರ ಇದೆ. ಅವರಿಗೆ ನೋಟಿಸ್ ಕೊಟ್ಟು ವಿಚಾರಣೆಗೆ ಬರುವಂತೆ ಹೇಳಲಾಗುತ್ತದೆ. ಬಳಿಕ ಹುಲಿ ಉಗುರಿನ ನೈಜತೆ ಬಗ್ಗೆ ಖಚಿತತೆ ಮಾಡಿಕೊಳ್ಳಬೇಕಿದೆ. ಹಸುವಿನ ಕೊಂಬನ್ನು ಹುಲಿ ಉಗುರು ಎಂದು ಮಾರಾಟ ಮಾಡಲಾಗುತ್ತೆ. ಅದಕ್ಕೆ ಅದರ ನೈಜತೆ ಬಗ್ಗೆ ಪರೀಶಿಲನೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

 ಬಿಗ್​ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಅವರನ್ನು ಬಂಧಿಸಿರುವ ಬಗ್ಗೆ ಮಾತನಾಡಿರುವ ಅವರು, ಸಂತೋಷ್ ಅವರನ್ನು ಏಕಾಎಕಿ ದಸ್ತಗಿರಿ ಮಾಡಲಿಲ್ಲ. ಲಾಕೆಟ್​ನ ತಪಾಸಣೆ ಮಾಡಿ ಅರ್ಧ ಮುಕ್ಕಾಲು ಗಂಟೆ ಅದರ ನೈಜತೆ ಗೊತ್ತಾದ ಮೇಲೆಯೇ ಅವರನ್ನ ಬಂಧಿಸಲಾಗಿದೆ ಎಂದು ತಿಳಿಸಿದರು.

ಇನ್ನು ನಟ ದರ್ಶನ ಹಾಗೂ ಜಗ್ಗೇಶ್​ ಅವರ ಹುಲಿ ಉಗುರಿನ ಲಾಕೆಟ್ ವೈರಲ್ ಆಗುತ್ತುರುವ ಬಗ್ಗೆ ಪ್ರತಿಕ್ರಿಯಿಸಿ,  ನೋಟಿಸ್ ನೀಡಲು ನನಗೆ ಅವಕಾಶ ಇದೆ. ದೂರು ಬಂದರೆ ನೋಟಿಸ್ ಜಾರಿ ಮಾಡಿ ಅವರನ್ನು ವಿಚಾರಣೆಗೊಳಪಡಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

SCROLL FOR NEXT